ಚಿಕ್ಕವಳಾಗಿದ್ದಾಗ ಬಾದಾಮಿಯ ಚಾಲುಕ್ಯರು ಕಟ್ಟಿಸಿದ ವೈವಿಧ್ಯಮಯ ದೇವಾಲಯಗಳ ಬಗ್ಗೆ ಪಾಠಗಳಲ್ಲಿ ಓದಿದ್ದೆ. ಆಗ ಅವ್ಯಾವವೂ ಮನಸ್ಸಿಗೆ ನಾಟಿರಲಿಲ್ಲ. ದೊಡ್ಡವಳಾದಂತೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಭಾರತದ ಬೇರೆ ಬೇರೆ ರಾಜವಂಶಗಳ ಬಗ್ಗೆ ಓದುತ್ತಿದ್ದಂತೆ ಕರ್ನಾಟಕದಲ್ಲೇ ಇರುವ ಇಂಥ ಒಂದು ಐತಿಹಾಸಿಕ ಮಹತ್ವದ ಜಾಗವನ್ನು ನಾನು ನೋಡಿಲ್ಲವಲ್ಲ ಅನ್ನಿಸತೊಡಗಿತು. ಕೌಟುಂಬಿಕ ಜವಾಬ್ದಾರಿ-ವೃತ್ತಿಜೀವನದ ವ್ಯಸ್ತತೆಗಳು ತಕ್ಕಮಟ್ಟಿಗೆ ಮುಗಿದು ಬಿಡುವು ಸಿಕ್ಕುತ್ತಿದ್ದಂತೆ ಈಚೆಗೆ ಒಂದೆರಡು ವರ್ಷಗಳಿಂದ ಇಷ್ಟಪಟ್ಡಲ್ಲಿಗೆ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಹಾಗೆ ಕೆಲವು ದಿವಸಗಳ ಹಿಂದೆ ನಾನು ಹೋಗಿದ್ದು ಬಾದಾಮಿಗೆ. ಈ ಬಾರಿ ಜತೆಗೆ ಯಾರೂ ಇರಲಿಲ್ಲ. ಗಣೇಶ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಿ ಬಾದಾಮಿ ತಲುಪಿದಾಗ ನನ್ನ ಸಾಹಿತ್ಯದ ಅಭಿಮಾನಿ ಕಿರಿಯ ಸ್ನೇಹಿತ ಶಶಿಕಾಂತ ಗೌಡರ್ ನನಗಾಗಿ ಕಾಯುತ್ತಿದ್ದರು. ಅವರನ್ನು ಮೊದಲೇ ಸಂಪರ್ಕಿಸಿ ಉಳಕೊಳ್ಳುವ ಹೋಟೆಲ್ ಮತ್ತು ಸುತ್ತಾಟಕ್ಕೆ ಕಾರಿನ ವ್ಯವಸ್ಥೆಯನ್ನು ನಾನು ಮೊದಲೇ ಮಾಡಿಕೊಂಡಿದ್ದೆ. ಮೊದಲಿಗೆ ಶಶಿಕಾಂತ್ ಅವರ ಮನೆಗೆ ಹೋಗಿ ಅವರ ತಾಯಿ ಎಲ್ಲಮ್ಮ, ತಮ್ಮಂದಿರಾದ ಹಣಮಂತ ಮತ್ತು ರವಿ, ಅವರ ಪತ್ನಿಯರಾದ ಸುರೇಖಾ ಮತ್ತು ಸುನೀತಾರನ್ನು ಭೇಟಿಯಾಗಿ , ಅವರ ಆದರಾತಿಥ್ಯವನ್ನು ಸವಿದೆ. ಸ್ಥಳಗಳನ್ನು ನೋಡಲು ಹೋಗುವಾಗ ನನ್ನ ಜತೆಗೆ ಶಶಿಕಾಂತ್, ಅವರ ತಾಯಿ ಮತ್ತು ತಮ್ಮನ ಮಗಳು ಪುಟ್ಟ ಶ್ರೀರಕ್ಷಾ ಕೂಡಾ ಬಂದರು.
ಬಾದಾಮಿಗೆ ಹೋಗುವುದಕ್ಕೆ ಮೊದಲೇ ಅಲ್ಲಿನ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಲ್ಪ- ಸ್ವಲ್ಪ ಓದಿಕೊಂಡಿದ್ದೆ. ಬಾದಾಮಿಗೆ ಹಿಂದೆ 'ವಾತಾಪಿ' ಅನ್ನುವ ಹೆಸರಿತ್ತು. ಇದರ ಹಿಂದೆ ಒಂದು ಕಥೆಯಿದೆ. ಹಿಂದೆ ವಾತಾಪಿ ಮತ್ತು ಇಲವಲ ಎಂಬ ಇಬ್ಬರು ರಾಕ್ಷಸರಿದ್ದರಂತೆ. ಇಲವಲ ಅಣ್ಣನಿಗೆ ಮನುಷ್ಯರನ್ನು ಹಿಡಿದು ಅಹಾರವಾಗಿ ತರುತ್ತಿದ್ದನಂತೆ. ವಾತಾಪಿ ಅವರ ಹೊಟ್ಟೆಯೊಳ ಹೊಕ್ಕು ಹೊಟ್ಟೆಯನ್ನು ಸೀಳಿ ಹೊರಗೆ ಬಂದ ನಂತರ ಅವರನ್ನು ತಿನ್ನುತ್ತಿದ್ದನಂತೆ. ಒಮ್ಮೆ ಅಗಸ್ತ್ಯ ಮಹರ್ಷಿಗಳು ಅ ದಾರಿಯಾಗಿ ಬಂದರಂತೆ. ವಾತಾಪಿಯು ತಮ್ಮ ಹೊಟ್ಟೆಯೊಳಗೆ ಹೊಕ್ಕ ಕೂಡಲೇ ಅವರು ಹೊಟ್ಟೆಯ ಮೇಲೆ ಕೈಯಾಡಿಸುತ್ತ 'ವಾತಾಪಿ ಜೀರ್ಣೋದ್ಭವ' ಅಂದರಂತೆ. ವಾತಾಪಿ ಹೊಟ್ಟೆಯೊಳಗೆಯೇ ಸತ್ತು ಹೋದನಂತೆ. ಮಹರ್ಷಿಗಳು ಅಣ್ಣ-ತಮ್ಮ ಇಬ್ಬರನ್ನೂ ಅಕ್ಕಪಕ್ಕ ಇರುವ ಎರಡು ಪರ್ವತಗಳನ್ನಾಗಿ ಪರಿವರ್ತಿಸಿದರಂತೆ.
ಹೀಗೆ ಬಾದಾಮಿಯು ಪ್ರಾಕೃತಿಕ ರಕ್ಷಣೆಗಳನ್ನೊದಗಿಸುವ ಎರಡು ಬೃಹತ್ ಕೆಂಪು ಮರಳುಕಲ್ಲಿನ ಬೆಟ್ಟಗಳ ನಡುವೆ ಮಲಪ್ರಭಾ ಕಣಿವೆಯಲ್ಲಿ ನದಿಗಿಂತ ತುಸು ದೂರದಲ್ಲಿದೆ. ಅಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಬೃಹತ್ ಶಿಲಾಯುಗದ ತನಕದ ಒಂದಷ್ಟು ಇತಿಹಾಸ ಪೂರ್ವದ ಪ್ರದೇಶಗಳಿವೆ. ಇತಿಹಾಸದ ಆರಂಭ ಕಾಲದಲ್ಲಿ ಈ ಪ್ರದೇಶವು ಮಯೂರ ಅರಸರ ವಶದಲ್ಲೂ ನಂತರ ಶಾತವಾಹನರ ವಶದಲ್ಲೂ ಇದ್ದು ಕೊನೆಗೆ ಕದಂಬರ ವಶಕ್ಕೂ ಬಂದಿತೆಂದು ಹೇಳಲಾಗಿದೆ.
ಪಶ್ಚಿಮದ ಚಾಲುಕ್ಯರ ವಂಶವನ್ನು ಸ್ಥಾಪಿಸಿದವನು ಒಂದನೆಯ ಪುಲಿಕೇಶಿ. ಅಲ್ಲಿನ ಪ್ರಾಕೃತಿಕ ಸೌಂದರ್ಯ, ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ ಎತ್ತರದ ಬೆಟ್ಟ ಸಾಲುಗಳು, ಸಮೃದ್ಧ ನೀರಿನ ಮೂಲಗಳಿಂದ ಆಕರ್ಷಿತನಾಗಿ ಆತ ಅದರ ಸುತ್ತ ಭದ್ರವಾದ ಕೋಟೆ ಕಟ್ಟಿ ಕ್ರಿ.ಶ.೫೪೩ರಲ್ಲಿ ಅದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. ಈ ಶಕ್ತಿಯುತ ರಾಜವಂಶವು ಬಾದಾಮಿಯನ್ನು ಕ್ರಿ.ಶ.೫೪೩-೭೫೭ರ ತನಕ ಎರಡು ಶತಮಾನಗಳ ತನಕ ಆಳಿತು. ಆರಂಭದ ರಾಜರಲ್ಲಿ ಯಶಸ್ವಿಯಾಗಿ ರಾಜ್ಯಭಾರ ಮಾಡಿದವರು ಒಂದನೇ ಕೀರ್ತಿವರ್ಮ ಮತ್ತು ಎರಡನೇ ಪುಲಿಕೇಶಿ. ಅವರ ಕಾಲದಲ್ಲಿ ರಾಜ್ಯವು ಹೆಚ್ಚುಕಡಿಮೆ ಇಡೀ ದಕ್ಷಿಣಭಾರತದಾದ್ಯಂತ ವಿಸ್ತರಿಸಿಕೊಂಡಿತು. ನಡುವೆ ಪಲ್ಲವರಿಂದ ಆಕ್ರಮಿತವಾಗಿ ಸುಮಾರು ೧೨ ವರ್ಷಗಳ ಕಾಲ ಹಿಂದೆ ಸರಿದರೂ ಒಂದನೆಯ ವಿಕ್ರಮಾದಿತ್ಯನಿಂದ ಮರುಸ್ಥಾಪನೆಗೊಂಡು ತನ್ನ ವೈಭವವನ್ನು ಮತ್ತೆ ಮರಳಿ ಪಡೆಯಿತು. ಎರಡನೇ ಕೀರ್ತಿವರ್ಮನ ಕಾಲದಲ್ಲಿ ಅಭಿವೃದ್ಧಿಯ ಶಿಖರವೇರಿ ಕೊನೆಗೆ ರಾಷ್ಟ್ರಕೂಟ ವಂಶದ ರಾಜರಿಂದ ಸೋಲಿಸಲ್ಪಟ್ಟು ಪತನ ಹೊಂದಿತು. ರಾಷ್ಟ್ರಕೂಟರ ನಂತರ ಬಾದಾಮಿಯು ಕಲ್ಯಾಣದ ಚಾಲುಕ್ಯರು, ಸೇವುಣರು, ಯಾದವರು , ವಿಜಯನಗರದ ಅರಸರು, ಮತ್ತು ಮರಾಠರಿಂದ ಆಳಲ್ಪಟ್ಟು ಕೊನೆಗೆ ಬ್ರಿಟಿಷರ ವಶವಾಯಿತು.

ರಾಜಕೀಯ ಸುಸ್ಥಿರತೆ, ಭೌತಿಕ ಸಂಪತ್ತು,ಪ್ರಶಾಂತ ವಾತಾವರಣ ಹಾಗೂ ಧಾರ್ಮಿಕ ಸಹಿಷ್ಣುತೆಗಳಿಂದಾಗಿ ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಆಡಳಿತ ಮೊದಲಾದ ಹಲವು ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ಅವರಿಗೆ ಸಾಧ್ಯವಾಯಿತು. ಬಾದಾಮಿ-ಪಟ್ಟದಕಲ್ಲು-ಐಹೊಳೆಗಳು ಇಡಿಯ ದಕ್ಷಿಣ ಭಾರತದ ಸಂದರ್ಭದಲ್ಲೇ ವಾಸ್ತುಶಿಲ್ಪದ ಕೇಂದ್ರಗಳಾದವು. ಬೃಹತ್ ಮರಳುಗಲ್ಲುಗಳಿಂದ ಮೂರ್ತಿಗಳನ್ನೂ ಪ್ರತಿಮೆಗಳನ್ನೂ ಕೆತ್ತಿ ಅಲ್ಲಲ್ಲಿ ಮಂದಿರಗಳನ್ನು ಅವರು ನಿರ್ಮಿಸಿದರು. ಸಾವಿರಾರು ಮೂರ್ತಿಗಳು ಸುಲ್ತಾನರ ಅಕ್ರಮಣದ ಕಾಲದಲ್ಲಿ ಸೈನಿಕರಿಂದ ವಿನಾಶಕ್ಕೊಳಗಾದರೂ ಇನ್ನೂ ಆ ಸ್ಮಾರಕಗಳ ವೈಭವಕ್ಕೆ ಏನೂ ಕಮ್ಮಿಯಾಗಿಲ್ಲ ಅನ್ನುವುದೇ ಅವುಗಳ ಗಟ್ಟಿತನವನ್ನು ಸಾರಿ ಹೇಳುತ್ತದೆ.
ನಾವು ಬೆಳಗ್ಗೆ ಎಂಟು ಗಂಟೆಗೆ ನಮ್ಮ ಸುತ್ತಾಟವನ್ನು ಆರಂಭಿಸಿದೆವು. ಕಾರಿನ ಚಾಲಕ ಮಂಜುನಾಥ್ ನಮ್ಮನ್ನು ಮೊದಲು ಕರೆದುಕೊಂಡು ಹೋಗಿದ್ದು ಬಾದಾಮಿ ಗುಹಾಂತರ್ದೇವಾಲಯ ಸಮುಚ್ಛಯಕ್ಕೆ. ಇವುಗಳನ್ನು ಮೇ(ಗ)ಣ ಬಸದಿಗಳೆಂದು ಕರೆಯುತ್ತಾರೆ. ಆಗಿನ ಕಾಲದಲ್ಲಿ ಜೈನ ಹಾಗೂ ಬೌದ್ಧ ಸಂಚಾರಿ ಸನ್ಯಾಸಿಗಳು ಅಲ್ಲಿಗೆ ಬಂದರೆ ಪರಧರ್ಮ ಸಹಿಷ್ಣುಗಳಾದ ಚಾಲುಕ್ಯ ದೊರೆಗಳು ಅವರ ವಾಸ್ತವ್ಯಕ್ಕಾಗಿ ಜಪ ತಪ ಸ್ನಾನಾದಿಗಳಿಗೆ ಅನುಕೂಲಕರವಾದ ನಿಸರ್ಗದ ಮಡಿಲಲ್ಲಿರುವ ಈ ಗುಹಾಂತರ ದೇವಾಲಯಗಳಲ್ಲೇ ವ್ಯವಸ್ಥೆ ಮಾಡಿ ಕೊಡುತ್ತಿದ್ದರಂತೆ.
ಇಲ್ಲಿರುವ ಕೋಟೆಯ ಬುಡದಲ್ಲಿರುವ ಈ ನಾಲ್ಕು ಗುಹಾ ದೇವಾಲಯಗಳು ಅಖಂಡವಾದ ಬೆಟ್ಟವನ್ನು ಕೊರೆದು ಮಾಡಿದಂಥವು. ಇವು ನಾಲ್ಕು ಹಂತಗಳಲ್ಲಿ ಎತ್ತರೆತ್ತರಕ್ಕೆ ಹೋಗುತ್ತವೆ. ಒಂದನೇ ಗುಹಾದೇವಾಲಯಕ್ಕೆ ಐವತ್ತಕ್ಕೂ ಹೆಚ್ಚು ಮೆಟ್ಟಲುಗಳನ್ನು ಹತ್ತಿ ಹೋಗಬೇಕು. ಇದರ ಪಶ್ಚಿಮ ಗೋಡೆಯ ಮೇಲೆ ೧೮ ಕೈಗಳನ್ನು ಹೊಂದಿದ ಶಿವನು ಮೇಲಿನ ಎರಡು ಕೈಗಳಲ್ಲಿ ಸರ್ಪವನ್ನೂ ಉಳಿದ ಕೈಗಳಲ್ಲಿ ಡಮರು, ಜಪಮಣಿ, ಪಾಶ, ತ್ರಿಶೂಲ ಇತ್ಯಾದಿಗಳನ್ನು ಹಿಡಿದು ನೃತ್ಯ ಮಾಡುವ, ಸುಂದರ ಕೇಶ ವಿನ್ಯಾಸ ಹೊಂದಿರುವ ನಗುಮುಖದ ಶಿವ. ಈ ದೇವಾಲಯದ ಗೋಡೆಗಳಲ್ಲಿ ಹದಿನೆಂಟು ಕೈಗಳಿರುವ ಮಹಿಷ ಮರ್ದಿನಿ, ಅರ್ಧ ನಾರೀಶ್ವರ ಮತ್ತು ಹರಿಹರರ ಮೂರ್ತಿಗಳೂ ಇವೆ. ನಡು ಮಧ್ಯೆ ಹಿಂಭಾಗದಲ್ಲಿರುವ ಗರ್ಭಗುಡಿಯಲ್ಲಿ ಶಿವಲಿಂಗವೂ ಇದೆ. ಎರಡನೇ ಗುಹಾಲಯಕ್ಕೆ ಹೋಗಬೇಕಾದರೆ ಪುನಃ ಮೆಟ್ಟಲುಗಳನ್ನು ಹತ್ತಬೇಕು. ಇಲ್ಲಿರುವುದು ವೈಷ್ಣವ ದೇವಾಲಯ . ಇಲ್ಲಿ ವಿಷ್ಣುವಿನ ಅವತಾರಗಳಾದ ತ್ರಿವಿಕ್ರಮ, ಭೂವರಾಹ, ಮತ್ಸ್ಯ ಯಂತ್ರ ಮತ್ತು ಸ್ವಸ್ತಿಕಗಳ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಯಿಲ್ಲ. ಮೂರನೆಯ ಗುಹಾಲಯವನ್ನು ಕ್ರಿ.ಶ.೫೭೮ರಲ್ಲಿ ವಾಸ್ತುಶಿಲ್ಪದ ಪಿತಾಮಹನೆನಿಸಿದ ಮಂಗಳೇಶನು ಕೊರೆದು ಅದನ್ನು ತನ್ನ ಅಣ್ಣನಾದ ಒಂದನೆಯ ಕೀರ್ತಿವರ್ಮನಿಗೆ ಕೊಡುಗೆಯಾಗಿ ನೀಡಿದನಂತೆ. ಇಲ್ಲಿ ಹಿರಣ್ಯಕಶಿಪುವನ್ನು ಸಂಹಾರ ಮಾಡಿ ಅಟ್ಟಹಾಸಗೈದ ನರಸಿಂಹನು ಅಲಂಕೃತನಾಗಿ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ಪ್ರಹ್ಲಾದ ಮತ್ತು ಮಾನವ ರೂಪಿ ಗರುಡನೂ ಇದ್ದಾರೆ. ಇನ್ನೊಂದು ಬದಿಯಲ್ಲಿ ಆದಿಶೇಷನ ಮೇಲೆ ವಿರಾಜಮಾನನಾಗಿರುವ ಮಹಾವಿಷ್ಣು , ಲಕ್ಷ್ಮಿ ದೇವಿ ಮತ್ತು ಗರುಡರಿದ್ದಾರೆ. ಇಲ್ಲಿ ಮೊಗಸಾಲೆಯಲ್ಲಿ ಶಿಲ್ಪ ಸೌಂದರ್ಯದಿಂದ ತುಂಬಿರುವ ಆರು ದಪ್ಪನೆಯ ಕಂಬಗಳಿವೆ. ನಡುವಿನ ಅಂಕಣದಲ್ಲಿ ವಿಷ್ಣುವಿನ ಮೂರ್ತಿಯೂ ಇದೆ. ನಾಲ್ಕನೆಯ ಗುಹೆಗೆ ಹೋಗಲು ಹೆಚ್ಚು ಮೆಟ್ಟಲುಗಳಿಲ್ಲ. ನಾಲ್ಕನೇಯದು ಜೈನ ಗುಹಾಲಯ. ಇಲ್ಲಿ ಪಾರ್ಶ್ವ ನಾಥ, ಬಾಹುಬಲಿಗಳ ಮೂರ್ತಿಗಳಲ್ಲದೆ ಗರ್ಭಗೃಹದಲ್ಲಿ ೨೪ನೆಯ ತೀರ್ಥಂಕರನಾದ ಮಹಾವೀರನಿದ್ದಾನೆ. ಮೂರನೆಯ ಮತ್ತು ನಾಲ್ಕನೆಯ ಗುಹೆಗಳ ಮಧ್ಯೆ ಒಂದು ಬೌದ್ಧ ಶಿಲ್ಪವಿದೆ. ಅಲ್ಲೇ ಪಕ್ಕದಲ್ಲಿ ಮೇಲೆ ನುಸುಳಿ ಹೋಗಬಹುದಾದ ಚಿಕ್ಕ ಬಾಗಿಲಿದೆ. ಕೋಟೆಯ ಮೇಲ್ಭಾಗದಲ್ಲಿರುವ ತೋಫುಖಾನೆಗೆ ಹೋಗುವ ದಾರಿ ಇದು.
ಮೂರನೇ ಮತ್ತು ನಾಲ್ಕನೆಯ ಗುಹಾದೇವಾಲಯಗಳ ಮುಂಭಾಗದಲ್ಲಿ ಕೆಳಗೆ ವಿಶಾಲವಾದ ಅಗಸ್ತ್ಯ ಸರೋವರವಿದೆ. ಅದರ ಸುತ್ತ ದಂಡೆಯನ್ನು ಕಟ್ಟಲಾಗಿದೆ. ಸರೋವರದ ಉತ್ತರ ಭಾಗದಲ್ಲಿ ಗುಹಾದೇವಾಲಯಗಳ ಎದುರು ಭಾಗದಲ್ಲಿ ಅನತಿ ದೂರದಲ್ಲಿ ಮೆಟ್ಟಲುಗಳನ್ನು ಹತ್ತಿ ಹೋದರೆ ಭೂತ ನಾಥ ಗುಡಿ ಮತ್ತು ಪ್ರಾಚ್ಯ ವಸ್ತು ಸಂಗ್ರಹಾಲಯಗಳಿವೆ. ಇಲ್ಲಿ ಸುಮಾರು ೧೮೧ ಪ್ರಾಚ್ಯ ವಸ್ತುಗಳು ಶಿಲ್ಪಗಳು, ಕೆತ್ತನೆಗಳು ಮತ್ತು ಶಾಸನಗಳಿವೆ. ಇದನ್ನು ೧೯೮೨ರಲ್ಲಿ ಸ್ಥಾಪಿಸಲಾಯಿತಂತೆ. ಬಾದಾಮಿಯ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ಒಳನೋಟವು ನಮಗೆ ಇಲ್ಲಿ ಸಿಗುತ್ತದೆ. ವಸ್ತು ಸಂಗ್ರಹಾಲಯದಲ್ಲಿ ನಾಲ್ಕು ಗ್ಯಾಲರಿಗಳಿವೆ. ಮತ್ತು ಅವುಗಳ ಸುತ್ತಲೂ ಒಂದು ತೆರೆದ ಗ್ಯಾಲರಿ ಇದೆ. ಗ್ಯಾಲರಿಗಳಲ್ಲಿ ಚಾಲುಕ್ಯ ಕಲಾಕೃತಿಗಳು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿವೆ. ಇನ್ನೊಂದು ಬದಿಯಲ್ಲಿ ಹೊಂಕದಕಟ್ಟೆ ಆಂಜನೇಯ ಮತ್ತು ಮಲ್ಲಿಕಾರ್ಜುನ ಗುಡಿಗಳಿವೆ.
ಗುಹಾ ದೇವಾಲಯಗಳನ್ನು ನೋಡಿದ ನಂತರ ನಾವು ಬಾದಾಮಿಯ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಹೋದೆವು. ಅದು ಚೊಳಚಗುಡ್ಡದ ಸಮೀಪ ತಿಲಕಾರಣ್ಯದ ನಡುವೆ ಇದೆ. ಆದ್ದರಿಂದ ಇದಕ್ಕೆ ಶಾಕಾಂಬರಿ ಮತ್ತು ವನಶಂಕರಿ ಎಂಬ ಹೆಸರುಗಳೂ ಇವೆ. ಶಾಕಾಂಬರಿ ಎಂದರೆ ಪಾರ್ವತಿಯ ಅವತಾರ.
ಮೂಲ ದೇವಾಲಯವನ್ನು ೭ನೇ ಶತಮಾನದಲ್ಲಿ ಚಾಲುಕ್ಯ ರಾಜ ಒಂದನೆಯ ಜಗದೇಕಮಲ್ಲನು ಕಟ್ಟಿಸಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. ಚಾಲುಕ್ಯರಿಗಿಂತ ಮೊದಲೇ ಈ ದೇವಸ್ಥಾನವು ಅಸ್ತಿತ್ವದಲ್ಲಿತ್ತು ಎಂದೂ ಅಗ ಅಲ್ಲಿ ವೈಷ್ಣವ, ಶೈವ, ಜೈನ ಮತ್ತು ಶಾಕ್ತ ಪಂಥದವರಿಗೆ ಸಮಾನ ಅವಕಾಶವಿತ್ತೆಂದೂ ಪ್ರತೀತಿ ಇದೆ. ಶಾಕಾಂಬರಿ ಅವರ ಕುಲದೇವತೆ. ಇದು ಒಂದು ಶಕ್ತಿಪೀಠವೂ ಹೌದು. ಸ್ಥಳೀಯರು ಶಾಕಾಂಬರಿಯನ್ನು ಬಾಲವ್ವ, ಸುಂಕವ್ವ, ಶಿರವಂತಿ, ಚೌಡಮ್ಮ, ವನದುರ್ಗೆ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಬನಶಂಕರಿ ದುರ್ಗೆಯ ಆರನೇ ಅವತಾರ. ದೇಗುಲದ ಪ್ರವೆಶದ್ವಾರದ ಒಳಗಡೆ ಹೋದರೆ ಎರಡೂ ಬದಿಗಳಲ್ಲಿ ದೀಪಸ್ತಂಭಗಳಿವೆ.
ಆರಂಭದಲ್ಲಿ ದೇವಸ್ಥಾನದ ವಾಸ್ತು ದ್ರಾವಿಡ ಶೈಲಿಯಲ್ಲಿತ್ತಂತೆ. ಪುನರ್ನಿರ್ಮಾಣ ಮಾಡಿದಾಗ ವಿಜಯನಗರ ಶೈಲಿಯನ್ನು ಅನುಸರಿಸಲಾಯಿತು.ಈಗ ದೇವಾಲಯದ ನಾಲ್ಕೂ ಬದಿಗಳಲ್ಲಿ ಎತ್ತರವಾದ ಗೋಡೆಗಳಿವೆ. ಎದುರು ಮುಖ್ಯಭಾಗದಲ್ಲಿ ಒಂದು ಮುಖಮಂಟಪ, ಗರ್ಭಗುಡಿಯ ಮುಂದೆ ಒಂದು ಅರ್ಧಮಂಟಪ, ಮತ್ತು ಗರ್ಭಗುಡಿಯ ಮೇಲ್ಭಾಗದಲ್ಲಿ ಒಂದು ವಿಮಾನವಿದೆ. ಗರ್ಭಗೃಹದ ಒಳಗೆ ಬನಶಂಕರಿಯು ಸಿಂಹವಾಹಿನಿಯಾಗಿ ಕಾಲಕೆಳಗೆ ರಾಕ್ಷಸನನ್ನು ತುಳಿಯುತ್ತಿರುವ ಭಂಗಿಯ ಕಪ್ಪು ಶಿಲೆಯ ಮೂರ್ತಿಯಿದೆ. ದೇವಿಗೆ ಎಂಟು ಕೈಗಳಿವೆ.ಆ ಕೈಗಳಲ್ಲಿ ತ್ರಿಶೂಲ, ಡಮರು, ಕಪಾಲಪಾತ್ರ, ಘಂಟೆ, ವೇದಗ್ರಂಥ, ಖಡ್ಗ, ಖೇಟ, ಮತ್ತು ಕಪಾಲಗಳಿವೆ. ಬನಶಂಕರಿ ಚಾಲುಕ್ಯರ ಕುಲದೇವತೆ ಮಾತ್ರವಲ್ಲದೆ ದೇವಾಂಗ ಸಮುದಾಯ ಮತ್ತು ದೇಶಸ್ಥ ಬ್ರಾಹ್ಮಣರ ಕುಲದೇವತೆಯೂ ಹೌದು.
ದೇವಸ್ಥಾನದ ಪ್ರವೇಶ ದ್ವಾರದ ಹೊರಗಡೆ ಮುಂಭಾಗದಲ್ಲಿ ೩೬೦ ಅಡಿ ಚೌಕದ ಒಂದು ಪುಷ್ಕರಣಿ ಇದೆ. ಅದನ್ನು ಸ್ಥಳೀಯರು ಹರಿದ್ರಾತೀರ್ಥ ಅನ್ನುತ್ತಾರೆ. ನಿಜವಾಗಿಯೂ ಅದು ಹರಿಶ್ಚಂದ್ರ ತೀರ್ಥದ ಅಪಭ್ರಂಶ. ಪುಷ್ಕರಣಿಯ ಮೂರು ಬದಿಗಳಲ್ಲಿ ಕಲ್ಲುಮಂಟಪಗಳಿವೆ. ಸುತ್ತಲೂ ಪ್ರದಕ್ಷಿಣಾ ಪಥವೂ ಇದೆ. ಪಶ್ಚಿಮ ದಡದಲ್ಲಿ ದೀಪಸ್ತಂಭಗಳಿವೆ. ಇದೊಂದು ರೀತಿಯ ರಕ್ಷಣಾ ಗೋಪುರವೂ ಹೌದು. ಇದು ವಿಜಯನಗರದ ಕಾಲದಲ್ಲಿ ಮಾಡಿದ ಹಿಂದೂ- ಇಸ್ಲಾಮಿಕ್ ವಾಸ್ತುಶೈಲಿಯ ಸಮ್ಮಿಶ್ರಣವೂ ಆಗಿದೆ.

ದೇವಾಲಯದ ಪರಿಸರವು ಗಿಡಮರಗಳಿಂದ ತುಂಬಿ ಹಸುರಾಗಿದೆ. ತೆಂಗಿನಮರಗಳು, ಬಾಳೆ, ವೀಳ್ಯದೆಲೆ ಬಳ್ಳಿಗಳು ಮತ್ತು ಇತರ ಹಲವು ಮರಗಳಿವೆ. ಒಂದು ಭೀಕರ ಬರಗಾಲ ಬಂದಾಗ ದೇವಿಯು ಜನರಿಗೆ ಹಣ್ಣು ಹಂಪಲು ತರಕಾರಿಗಳನ್ನು ಒದಗಿಸಿ ಅವರ ಹಸಿವೆಯನ್ನು ಹಿಂಗಿಸಿದಳೆಂಬ ಕಾರಣದಿಂದ ಅವಳು ಶಾಕಾಂಬರಿಯಾದಳು ಎಂಬುದು ಒಂದು ಕಥೆ.
ಮುಂದೆ ನಾವು ಹೋಗಿದ್ದು ಶಿವಯೋಗಿಮಠಕ್ಕೆ . ಇಲ್ಲಿ ಲಿಂಗಾಯತರ ಗುರುಗಳಾದ ಕುಮಾರೇಶ್ವರ ಸ್ವಾಮೀಜಿ ಮತ್ತು ಸದಾಶಿವ ಗುರುಗಳ ಗದ್ದುಗೆ ಗಳಿದ್ದು ಅನೇಕ ಋಷಿಮುನಿಗಳು ತಪಸ್ಸು ಮಾಡಿದ ಪವಿತ್ರಕ್ಷೇತ್ರವಿದು. ಸದಾಶಿವಗುರುಗಳ ಸಮಾಧಿಯ ಮೇಲಿನ ಗೋಪುರ ವರ್ಣಮಯವಾಗಿದ್ದು ಬಹಳ ಸುಂದರವಾಗಿದೆ. ಇಲ್ಲಿ ಜಂಗಮ ವಟುಗಳಿಗೆ ಸಂಸ್ಕೃತದ ಸಂಪೂರ್ಣ ಶಿಕ್ಷಣ ಕೊಡುವ ಸಂಸ್ಕೃತ ಪಾಠಶಾಲೆಯಿದೆ. ಇಲ್ಲಿ ಹಸುವಿನ ಸೆಗಣಿಯನ್ನು ಸುಟ್ಟು ತಯಾರಿಸಿದ ಪರಿಶುದ್ಧ ವಿಭೂತಿಯ ನಿರ್ಮಾಣ ಕೇಂದ್ರವಿದೆ .
ಅಲ್ಲಿಂದ ಮುಂದೆ ನಾವು ಅಲ್ಲೇ ಸಮೀಪವಿರುವ ಮಹಾಕೂಟೇಶ್ವರನ ಪ್ರಾಚೀನ ದೇವಾಲಯಕ್ಕೆ ಹೋದೆವು. ಒಂದು ಕಥೆಯ ಪ್ರಕಾರ ಆಗಸ್ತ್ಯ ಮಹಾಮುನಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ಕೋಟಿ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಬೇಕೆಂದು ನಿಶ್ಚಯಿಸಿ ತಾವು ಹೋದ ಕಡೆಗಳಲ್ಲೆಲ್ಲಾ ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಿದ್ದರಂತೆ. ಹಾಗೆ ಅವರು ಮಹಾಕೂಟಕ್ಕೆ ಬಂದಾಗ ಆ ಜಾಗವು ಅರಣ್ಯಮಯವಾಗಿತ್ತಂತೆ. ಅಲ್ಲಿ ಕೆಲವು ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದ ನಂತರ ಕೋಟಿ ಲಿಂಗಕ್ಕೆ ಒಂದು ಲಿಂಗ ಮಾತ್ರ ಬಾಕಿಯಿತ್ತಂತೆ. ಆದ್ದರಿಂದ ಅವರು ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು ಲಿಂಗೋದ್ಭವವಾಗುವಂತೆ ಮಾಡಿದರಂತೆ.
ದಕ್ಷಿಣ ಕಾಶಿ ಎಂದು ಪ್ರಸಿದ್ದವಾದ ಮಹಾಕೂಟವು ಒಂದು ದೇವಾಲಯ ಸಮುಚ್ಛಯ. ಇದು ಶೈವ ಪಂಥದವರ ಬಹಳ ಮುಖ್ಯ ಯಾತ್ರಾಸ್ಥಳ. ಕ್ರಿ.ಶ.೬-೭ನೇ ಶತಮಾನದಲ್ಲಿ ಚಾಲುಕ್ಯ ವಂಶದ ಅರಸರು ಇದನ್ನು ಕಟ್ಟಿಸಿದರು. ಇಲ್ಲಿರುವ ಮಹಾಕೂಟ ಸ್ತಂಭದ ಮೇಲಿನ ಶಾಸನಗಳು ಇದನ್ನು ಕ್ರಿ. ಶ.೫೯೫-೬೯೨ ಕಾಲದಲ್ಲಿ ವಿನಯಾದಿತ್ಯನ ಪ್ರೇಯಸಿ ವಿನಾಪೋತಿಯು ಕಟ್ಟಿಸಿದಳು ಅನ್ನುತ್ತವೆ. ೭ನೇ ಶತಮಾನದಲ್ಲಿ ಕರ್ನಾಟಕದ ಎಲ್ಲೆಡೆಯ ಶಿಲ್ಪಿಗಳು ಬಂದು ದಕ್ಷಿಣ ಭಾರತದ ದ್ರಾವಿಡ ಶೈಲಿಯ ಜತೆಜತೆಗೇ ಉತ್ತರದ ರೇಖಾನಾಗರ ಶೈಲಿಯ ದೇವಸ್ಥಾನಗಳನ್ನೂ ಕಟ್ಟಿದರು. ಅಲ್ಲದೆ ಈ ಎರಡೂ ಶೈಲಿಗಳೊಂದಿಗೆ ಸ್ಥಳೀಯ ಶೈಲಿಯೂ ಬೆರೆತುಕೊಂಡಿದೆ. ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಗೋಪುರವಿದೆ.
ಒಂದು ಪ್ರಾಕೃತಿಕ ಬೆಟ್ಟದ ನೀರಿನ ಒರತೆಯು ದೇವಾಲಯದ ಆವರಣದೊಳಗಿನ ಪುಷ್ಕರಣಿಯನ್ನು ಸದಾಕಾಲ ತುಂಬಿರುವಂತೆ ಮಾಡುವುದು ಇದರ ವೈಶಿಷ್ಟ್ಯ. ವಿಷ್ಣು ಪುಷ್ಕರಣಿ ಎಂದು ಕರೆಯಲ್ಪಡುವ ಇದು ಪಾಪನಾಶಿನಿ ತೀರ್ಥವೂ ಹೌದು. ದೇವಾಲಯಗಳಲ್ಲಿ ದ್ರಾವಿಡ ಶೈಲಿಯಲ್ಲಿ ಇರುವ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನಗಳು ಮುಖ್ಯವಾದವು. ವಿಷ್ಣು ಪುಷ್ಕರಣಿಯ ಮಧ್ಯೆ ಒಂದು ಸಣ್ಣ ಶಿವನ ಗುಡಿಯಿದೆ. ಅಲ್ಲಿ ಐದು ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿದ ಒಂದು ಪಂಚಮುಖಿ ಲಿಂಗವಿದೆ.
ಮಹಾಕೂಟ ಸ್ತಂಭವನ್ನು ಒಂದನೆಯ ಪುಲಿಕೇಶಿಯ ರಾಣಿ ದುರ್ಲಭದೇವಿ ಅನುದಾನ ಕೊಟ್ಟು ಕಟ್ಟಿಸಿದಳು ಅನ್ನುತ್ತಾರೆ. ಮೊದಲೇ ಕೊಟ್ಟ ಅನುದಾನಕ್ಕೆ ಅವಳು ಪಟ್ಟದಕಲ್ಲು ಮತ್ತು ಐಹೊಳೆಗಳ ಹತ್ತು ಗ್ರಾಮಗಳನ್ನು ಸೇರಿಸಿ ಮಹಾಕೂಟೇಶ್ವರನಿಗೆ ದತ್ತಿಯಾಗಿ ಕೊಟ್ಟಳು. ಇಲ್ಲಿನ ಶಾಸನವು ಚಾಲುಕ್ಯರ ಬಗ್ಗೆ, ಅವರ ಸೇನಾ ಸಾಹಸಗಳ ಬಗ್ಗೆ, ಅವರ ವಿಜಯಗಳ ಬಗ್ಗೆ, ಆರಂಭದ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುತ್ತದೆ. ವಿನಾಪೋತಿಯ ಶಾಸನವು ದೇವಸ್ಥಾನದ ಪ್ರವೇಶದ್ವಾರದಳ್ಲಿದೆ. ಅದರಲ್ಲಿ ಅವಳು ದೇವರಿಗೆ ಹವಳ ಹಾಗೂ ಬೆಳ್ಳಿಯ ಕೊಡೆಯನ್ನು ಅರ್ಪಿಸಿದ ವಿವರಗಳಿವೆ. ಮಹಾಕೂಟದಲ್ಲಿ ಕದಂಬ ಶೈಲಿಯ ಮತ್ತು ನಾಗರ ಮೇಲ್ಮೈ ರಚನೆಗಳಿರುವ ವಿಷ್ಣು ದೇಗುಲ, ಬಿಳಿಯ ಬಣ್ಣದ ದ್ರಾವಿಡ ಶೈಲಿಯ ಮಹಾಕೂಟೇಶ್ವರ ಮತ್ತು ನಾಗರ ಶೈಲಿಯ ಸಂಗಮೇಶ್ವರ ದೇವಸ್ಥಾನಗಳಿವೆ. ವಾತಾಪಿ ಮತ್ತು ಇಲವಿಲ ಎಂಬ ರಾಕ್ಷಸರನ್ನು ಅಗಸ್ತ್ಯ ಮಹರ್ಷಿಗಳು ಕೊಂದು ಎರಡು ಪರ್ವತಗಳನ್ನಾಗಿ ಪರಿವರ್ತಿಸಿದ್ದು ಇದೇ ದೇವಸ್ಥಾನದ ಹಿಂದುಗಡೆ ಎಂಬ ನಂಬಿಕೆಯಿದೆ. ೧೮೮೦ರಲ್ಲಿ ನಡೆದ ಉತ್ಖನನದಲ್ಲಿ ದೊರೆತ ಶಾಸನವು ಈ ದೇವಸ್ಥಾನವನ್ನು ಮಂಗಳೇಶನು ದಕ್ಷಿಣ ಮತ್ತು ಮಧ್ಯಭಾರತದ ಎಲ್ಲಾ ಶಿಲ್ಪಿಗಳನ್ನು ಕರೆಸಿ ಕಟ್ಟಿಸಿದ್ದು ಅನ್ನುತ್ತದೆ.
ಮಹಾಕೂಟೇಶ್ವರ ದೇವಸ್ಥಾನದ ಪ್ರವೇಶದ್ವಾರದಲ್ಲಿ ಶೈವ ದ್ವಾರಪಾಲಕರು ನಿಂತಿದ್ದಾರೆ. ಗರ್ಭಗೃಹಕ್ಕೆ ಹೋಗುವ ದ್ವಾರವು ಕಲಾತ್ಮಕವಾಗಿದೆ. ಅದರೆ ಇತ್ತೀಚೆಗೆ ಕಡೆಗಣನೆಗೆ ಒಳಗಾದ್ದರಿಂದ ಕಪ್ಪಾಗಿ ಬಿಟ್ಟಿದೆ. ಒಳಗೆ ನೆಲದ ಮೇಲೆ ಯೋನಿಪೀಠದ ಮೇಲೆ ಶಿವಲಿಂಗವಿದೆ. ಭೋಲೇನಾಥನಿಗೆ ತಲೆಬಾಗಿ ನಮಸ್ಕರಿಸುವಾಗ ಪೂಜಾರಿಯು ಆಶೀರ್ವದಿಸುತ್ತಾನೆ. ಹೊರಗೆ ಲಾಕುಲೀಶ, ವರಾಹ, ತ್ರಿಮೂರ್ತಿಗಳು ಹಾಗೂ ಇನ್ನೂ ಅನೇಕ ಪೌರಾಣಿಕ ಪಾತ್ರಗಳ ಗುಲಾಬಿ ಬಣ್ಣದ ಗ್ರಾನೈಟ್ ಶಿಲೆಯಲ್ಲಿ ಮಾಡಿದ ಶಿಲ್ಪಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮುಖ್ಯ ದೆವಾಲಯದ ಹಿಂದೆ ಪುಟ್ಟದೊಂದು ಅನ್ನಪೂರ್ಣಾದೇವಿಯ ಗುಡಿಯಿದೆ.
ಚಾಲುಕ್ಯ ಶೈಲಿಯಲ್ಲಿ ಕಟ್ಟಿದ ಸುಂದರ ದೇವಾಲಯವಿದು. ನಾವು ಹೋದ ದಿವಸ ಶ್ರಾವಣದ ಕೊನೆಯ ಸೋಮವಾರವಾದ್ದರಿಂದ ತುಂಬಾ ಜನಸಂದಣಿಯಿತ್ತು. ಪುಷ್ಕರಿಣಿಗೆ ಮೇಲಿಂದ ಜಿಗಿದು ಕೇಕೆ ಹಾಕುತ್ತ ಅನೇಕ ಮಂದಿ ಯುವಕರು ಸ್ನಾನ ಮಾಡುತ್ತಿದ್ದರು. ಎಲ್ಲಿ ನೋಡಿದರೂ ಕೋತಿಗಳು. ಭಕ್ತರ ಕೈಯಿಂದ ಬಾಳೆಹಣ್ಣು-ತೆಂಗಿನಕಾಯಿಗಳನ್ನು ಬೇಡಿ ತಿನ್ನುವುದನ್ನು ನೋಡುವುದೇ ಒಂದು ಖುಷಿ. ( ಬಾದಾಮಿ-ಐಹೊಳೆ-ಪಟ್ಟದಕಲ್ಲು ಎಲ್ಲಾ ಕಡೆಗಳಲ್ಲೂ ಕೋತಿಗಳು ಕಾಣಸಿಗುವುದು ಸರ್ವೇ ಸಾಮಾನ್ಯವಾಗಿತ್ತು.,) ದೇವರ ದರ್ಶನ ಪಡೆದು ತೀರ್ಥ ಪ್ರಸಾದ ತೆಗೆದುಕೊಂಡು ಅಲ್ಲಿಂದ ಹೊರಟು ಪಟ್ಟದಕಲ್ಲಿಗೆ ಬಂದೆವು.
ಪಟ್ಟದಕಲ್ಲು ಬಾದಾಮಿಯಿಂದ ೨೨.೪ ಕಿ.ಮೀ.ದೂರದಲ್ಲಿದೆ. ಇಕ್ಕೆಲಗಳಲ್ಲೂ ಗದ್ದೆ ಬಯಲುಗಳು. ಅಲ್ಲಿ ಹೆಚ್ಚಾಗಿ ಬೆಳೆಯುವುದು ಮುಸುಕಿನ ಜೋಳ, ಶೇಂಗಾ ಇತ್ಯಾದಿ. ತೆಂಗಿನ ತೋಟಗಳಿಲ್ಲ. ಹೊಲದ ಅಂಚುಗಳಲ್ಲಷ್ಟೇ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳು. ರಸ್ತೆಯುದ್ದಕ್ಕೂ ಎದುರು ಬದಿಯಿಂದ ಗಂಟೆಗಳನ್ನಾಡಿಸುತ್ತ ತಲೆಯಾಡಿಸುತ್ತ ನಗುನಗುತ್ತ ಗಾಡಿಯ ಭಾರವನ್ನೆಳೆದುಕೊಂಡು ಬರುವ ದಷ್ಟಪುಷ್ಟ ಎತ್ತುಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಪಟ್ಟದಕಲ್ಲು ತಲುಪಿದಾಗ ಅಲ್ಲಿ ಪ್ರವಾಸಿಗರಿಂದ ಜಾಗ ತುಂಬಿ ಹೋಗಿತ್ತು. ಒಬ್ಬರಿಗೆ ರೂ.೪೦ ಟಿಕೆಟ್ ದರ. ಒಳಗೆ ಹೋಗುವ ದಾರಿಯಲ್ಲಿ ಸುತ್ತಮುತ್ತೆಲ್ಲ ಶಿಸ್ತಿನಿಂದ ಬೆಳೆಸಿ ಕಾಪಿಟ್ಟ ಉದ್ಯಾನ ಸುಂದರವಾಗಿತ್ತು. ದೂರದಿಂದ ಕಾಣುತ್ತಿದ್ದ ದೇವಸ್ಥಾನಗಳ ಸಮುಚ್ಛಯ ನೋಡಿ ಎದೆ ಸಂತಸದಿಂದ ಜಿಗಿಯಿತು.
ಪಟ್ಟದಕಲ್ಲಿನ ದೇವಾಲಯಗಳನ್ನು ದ್ರಾವಿಡ-ವಿಮಾನ ದೇವಾಲಯಗಳು ಮತ್ತು ಉತ್ತರ ಭಾರತದ ರೇಖಾ ನಾಗರ ಪ್ರಸಾದ ದೇವಾಲಯಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ,ಕಾಡಸಿದ್ಧೇಶ್ವರ, ಜಂಬುಲಿಂಗ, ಗಳಗನಾಥ, ಪಾಪನಾಥ ಮತ್ತು ಕಾಶಿ ವಿಶ್ವೇಶ್ವರ ಮೊದಲಾದ ದೇವಾಲಯಗಳು ಇಲ್ಲಿವೆ. ಒಂದು ಜಯನಬಸದಿಯೂ ಇದೆ.
ಸಂಗಮೇಶ್ವರ ದೇವಾಲಯವು ಮಕರ, ವ್ಯಾಲ, ಮುಂತಾದ ಚಿತ್ರಗಳಿರುವ ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿತವಾದ ಗೋಡೆಗಳನ್ನು ಹೊಂದಿದೆ. ಅವುಗಳಿಗೆ ಸಮಾನಾಂತರದಲ್ಲಿ ಜಾಲಂಧ್ರ ದೇವಕೋಷ್ಟಗಳಿವೆ. ಈ ದೇವಾಲಯವನ್ನು ಚಾಲುಕ್ಯ ವಿಜಯಾದಿತ್ಯ ದೊರೆ ೭ನೇ ಶತಮಾನದಲ್ಕಿ ಕಟ್ಟಲಾರಂಭಿಸಿ ಮುಂದೆ ಅನೇಕ ದೊರೆಗಳ ಮೂಲಕ ಕೆಲಸ ಮುಂದುವರೆದರೂ ಅದು ಇನ್ನೂ ಅಪೂರ್ಣವಾಗಿದೆ. ವಿರೂಪಾಕ್ಷ ದೇವಾಲಯವನ್ನು ಚಾಲುಕ್ಯ ದೊರೆ ಎರಡನೆಯ ವಿಕ್ರಮಾದಿತ್ಯನ ಪಟ್ಟದ ರಾಣಿ ಲೋಕಮಹಾದೇವಿಯು ಪಲ್ಲವರ ಮೇಲೆ ವಿಕ್ರಮಾದಿತ್ಯನು ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಿದಳು ಅನ್ನುತ್ತಾರೆ. ಕಂಚಿಯ ಕೈಲಾಸನಾಥ ದೇವಾಲಯವನ್ನು ಕಟ್ಟಿದ ಪ್ರಸಿದ್ಧ ಶಿಲ್ಪಿಗಳೇ ವಿರೂಪಾಕ್ಷ ದೇವಾಲಯವನ್ನೂ ಅದೇ ಮಾದರಿಯಲ್ಲಿ ಕಟ್ಟಿದರಂತೆ. ಇದು ತಳವಿನ್ಯಾಸದಲ್ಲಿ ಪ್ರದಕ್ಷಿಣಾ ಪಥದಿಂದ ಆವೃತ್ತವಾದ ಗರ್ಭಗೃಹವನ್ನು ಒಳಗೊಂಡಿದೆ. ವಾಸ್ತುಶಿಲ್ಪದ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಈ ದೇವಾಲಯವು ದ್ರಾವಿಡ ಶೈಲಿಯ ಒಂದು ವಿಶಿಷ್ಟ ಕಲಾಕೃತಿಯಾಗಿದೆ. ಮುಂದೆ ರಾಷ್ಟ್ರಕೂಟರು ಎಲ್ಲೋರಾದಲ್ಲಿ ಕಟ್ಟಿಸಿದ ಕೈಲಾಸನಾಥ ದೇವಾಲಯಕ್ಕೆ ಇದುವೇ ಮೂಲ ಮಾದರಿಯಾಯಿತಂತೆ. ಮಲ್ಲಿಕಾರ್ಜುನ ದೇವಾಲಯವನ್ನು ವಿರೂಪಾಕ್ಷ ದೇವಾಲಯದ ಮಾದರಿಯಲ್ಲಿ ಇಮ್ಮಡಿ ವಿಕ್ರಮಾದಿತ್ಯನ ಇನ್ನೋರ್ವ ರಾಣಿಯಾದ ತ್ರೈಲೋಕ್ಯ ಮಹಾದೇವಿಯು ಪತಿಯು ಪಲ್ಲವರನ್ನು ಗೆದ್ದ ವಿಜಯದ ಸಂಕೇತವಾಗಿ ಕಟ್ಟಿಸಿದಳು ಎಂಬ ಪ್ರತೀತಿ ಇದೆ.
ಕಾಡಸಿದ್ಧೇಶ್ವರ ದೇವಾಲಯವು ಸುಮಾರು ೭ನೇ ಶತಮಾನದಲ್ಲಿ ನಿರ್ಮಾಣವಾದ ಒಂದು ಸರಳ ಶೈಲಿಯ ದೇವಾಲಯ. ತಳವಿನ್ಯಾಸವನ್ನು ವಿಸ್ತರಿಸುವ ವಾಸ್ತು ಶೈಲಿಯ ಒಂದು ಪ್ರಾಯೋಗಿಕ ಹಂತಕ್ಕೆ ಇದು ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಗರ್ಭಗೃಹದ ಮೇಲೆ ಮೂರು ಬೋದಿಗೆಗಳಿರುವ ರೇಖಾ ನಾಗರ ಶೈಲಿಯ ಶಿಖರವಿದೆ. ಜಂಬುಲಿಂಗ ದೇವಾಲಯವು ಶಿಖರದ ಮುಂಭಾಗದಲ್ಲಿ ಪ್ರಮುಖವಾಗಿ ಕಾಣುವ ಶಂಖನಾಶ ಮತ್ತು ದೇವಾಲಯದ ಮುಂದೆ ನಂದಿಮಂಟಪವನ್ನು ಅಳವಡಿಸುವ ವಾಸ್ತು ಶೈಲಿಯಲ್ಲಿನ ಪ್ರಯೋಗದ ಒಂದು ಹಂತವನ್ನು ಪ್ರತಿನಿಧಿಸುತ್ತದೆ. ಇದರ ಶಿಖರವು ರೇಖಾನಾಗರ ಶೈಲಿಯಲ್ಲಿದ್ದು ಮೇಲಿನ ಅಮಲಕ ಮತ್ತು ಕಲಶಗಳು ಭವ್ಯವಾಗಿವೆ. ಈ ಶಿಖರದ ಮುಂದೆ ಪಾರ್ವತಿ ಹಾಗೂ ನಂದಿಯರ ಜತೆಗೆ ಸುಂದರವಾದ ನಟರಾಜನ ಉಬ್ಬುಶಿಲ್ಪವಿದೆ. ಗಳಗನಾಥ ದೇವಾಲಯವು ಒಂದು ವಿಶಾಲವಾದ ದೇವಾಲಯ. ಗಳಗನಾಥ ಅಂದರೆ ಶಿವ. ಈ ದೇವಾಲಯದ ಮೇಲಿರುವ ಶಿಖರವು ಉತ್ತರಭಾರತದ ರೇಖಾನಾಗರ ಶೈಲಿಯಲ್ಲಿದೆ. ಈ ರೀತಿಯ ಶಿಖರವನ್ನು ಪುರಿಯ ಜಗನ್ನಾಥ ಮತ್ತು ಕೋನಾರ್ಕದ ಸೂರ್ಯ ದೇವಾಲಯಗಳಲ್ಲಿ ಕಾಣಬಹುದು. ಕಾಶಿವಿಶ್ವನಾಥ ದೇವಾಲಯವೂ ರೇಖಾ ನಾಗರ ಶಿಖರವನ್ನು ಹೊಂದಿದ್ದು ಇದು ಕ್ರಿ.ಶ.೮ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಮಂಟಪದ ಮಧ್ಯದ ಛಾವಣಿಯಲ್ಲಿ ಶಿವಪಾರ್ವತಿಯರ ಸುಂದರ ಕೆತ್ತನೆಗಳಿವೆ. ಪಾರ್ವತಿಯ ತೋಳಲ್ಲಿ ಕಾರ್ತಿಕೇಯನಿದ್ದಾನೆ. ಮಂಟಪದ ನಾಲ್ಕು ಕಂಬಗಳ ಮೇಲೆ ಪೌರಾಣಿಕ ಚಿತ್ರಗಳನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ಪಾಪನಾಥ ದೇವಾಲಯವು ಶಿವನ ದೇವಾಲಯವಾಗಿದ್ದು ಶಾಸನದಲ್ಲಿ ಇದನ್ನು ಮುಕ್ತೇಶ್ವರ ದೇವಾಲಯ ಎಂದು ಕರೆಯಲಾಗಿದೆ. ಇಲ್ಲಿ ರಾಮಾಯಣದ ಕಥೆಗಳ ವಿವಿಧ ಸನ್ನಿವೇಶಗಳನ್ನು ಬಿಂಬಿಸುವ ಕೆತ್ತನೆಗಳಿವೆ. ಇಲ್ಲಿಯೂ ರೇಖಾನಾಗರ ಶೈಲಿಯನ್ನು ಕಾಣಬಹುದಾಗಿದೆ.
ಪಟ್ಟದ ಕಲ್ಲಿನಲ್ಲಿ ನಮಗೆ ಸ್ಪೆಯಿನ್ ನಿಂದ ಬಂದ ಸುಸಾನ್ ಮತ್ತು ಅವರ ಸ್ನೇಹಿತರ ತಂಡದ ಪರಿಚಯವಾಯಿತು. ಅವರು ಇದು ಅರನೇ ಬಾರಿ ಇಂಡಿಯಾ ಪ್ರವಾಸ ಮಾಡುತ್ತಿರುವುದಂತೆ. ಅವರ ಅಸಕ್ತಿಯ ಬಗ್ಗೆ ತಿಳಿದು ನಮಗೆ ತುಂಬಾ ಸಂತೋಷವಾಯಿತು.
ನಾವು ಸಂದರ್ಶಿಸಿದ ಕೊನೆಯ ಸ್ಥಳ ಐಹೊಳೆ ಪಟ್ಟದಕಲ್ಲಿನಿಂದ ೧೩.೭ ಕಿ.ಮೀ.ದೂರದಲ್ಲಿದೆ. ಐಹೊಳೆ ಪ್ರಸಿದ್ಧವಾಗಿರುವುದು ಅಲ್ಲಿನ ಬೃಹತ್ ದುರ್ಗದ ದೇವಾಲಯಕ್ಕೆ. ಈ ದೇವಾಲಯವು ಕೋಟೆಯ ಹತ್ತಿರವೇ ಇರುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು ಅನ್ನುವುದು ಅನೇಕರ ಅಭಿಪ್ರಾಯ. ಇಲ್ಲಿ ಗರ್ಭಗೃಹ, ಅದರ ಸುತ್ತ ಪ್ರದಕ್ಷಿಣಾಪಥ, ಸಭಾಮಂಟಪ, ಮುಖಮಂಟಪ, ಮತ್ತು ಮುಖಮಂಟಪದ ಸುತ್ತ ಇನ್ನೊಂದು ಪ್ರದಕ್ಷಿಣಾ ಪಥಗಳಿವೆ. ಈ ದೇವಾಲಯವು ಬೌದ್ಧ ಚೈತ್ಯಾಲಯಗಳನ್ನು ಹೋಲುತ್ತದೆ. ಗರ್ಭಗೃಹವು ಗಜಪುಷ್ಪಾಕಾರ ಅಥವಾ ಅರ್ಧವೃತ್ತಾಕಾರವಾಗಿದ್ದು ಇದು ಮಹಾಕೂಟದಲ್ಲೂ ಇದೆ. ಗರ್ಭಗೃಹದ ಮೇಲೆ ರೇಖಾನಾಗರಪ್ರಸಾದ ಪದ್ಧತಿಯ ಶಿಖರವಿದ್ದು ಅದರ ಮೇಲ್ಭಾಗದಲ್ಲಿ ಅಮಲಕ ಮತ್ತು ಕಲಶಗಳಿಲ್ಲ. ಆದರೆ ನಡುವೆ ಚೈತ್ಯದ ಚಿಹ್ನೆಗಳಿವೆ. ಮಹಾದ್ವಾರ ಮಂಟಪದ ಉತ್ತರ ಗೋಡೆಯ ಮೇಲೆ ಎರಡು ಶಾಸನಗಳೂ ಇವೆ. ಅಧಿಷ್ಠಾನದ ದಕ್ಷಿಣ ಭಾಗದಲ್ಲಿ ಶ್ರೀ ಜಿನಾಲಯ ಎಂದು ಉಲ್ಲೇಖವಿರುವ ೮ನೇ ಶತಮಾನದ ಲಕ್ಷಣವುಳ್ಳ ಲಿಪಿಯಿದೆ. ಅದ್ದರಿಂದ ಇದು ಒಂದು ಕಾಲದಲ್ಲಿ ಜೈನಬಸದಿಯಾಗಿತ್ತೆಂದು ತಿಳಿಯಲಾಗಿದೆ. ಆದರೆ ಅದರ ಒಳಮಂಟಪದ ಹೊರಗೋಡೆಯಲ್ಲಿರುವ ಶಿವ, ವಿಷ್ಣು, ವರಾಹ, ಮಹಿಷಾಸುರ ಮರ್ದಿನಿ ಹರಿಹರಮೂರ್ತಿಗಳು ಅದು ಮೂಲತಃ ವೈದಿಕ ಸಂಪ್ರದಾಯಕ್ಕೆ ಸೇರಿದ್ದೆಂದು ಸ್ಪಷ್ಟವಾಗಿ ಹೇಳುತ್ತದೆ.
ದುರ್ಗದ ದೇವಾಲಯದ ಹಿಂದುಗಡೆ ಆವರಣದ ಒಳಗೆಯೇ ಒಂದು ಮ್ಯೂಸಿಯಂ ಇದೆ. ಇಲ್ಲಿ ಸುಮಾರು ೩೮೧ ಪ್ರಾಚ್ಯವಸ್ತುಗಳಿವೆ. ಬ್ರಾಹ್ಮಣ, ಜೈನ ಮತ್ತು ಬೌದ್ಧ,ರಿಗೆ ಸಂಬಂಧಿಸಿದ ಶಿಲ್ಪಗಳು ಮತ್ತು ಕೆತ್ತನೆಗಳು ಇಲ್ಲಿವೆ. ಆರಂಭದಲ್ಲಿ ಅಂದರೆ ೧೯೭೦ರಲ್ಲಿ ಇದನ್ನು ಉತ್ಖನನದಲ್ಲಿ ಸಿಕ್ಕಿದ ಕೆತ್ತನೆಗಳು ಮತ್ತು ಶಿಲ್ಪಗಳನ್ನು ಪ್ರದರ್ಶನಕ್ಕಿಡುವ ಒಂದು ಚಿಕ್ಕ ಸರಳ ಕಟ್ಟಡವನ್ನಾಗಿ ಮಾಡಲಾಗಿತ್ತು. ೧೯೮೭ರಲ್ಲಿ ಒಂದು ಪೂರ್ಣ ಪ್ರಮಾಣದ ವಸ್ತು ಸಂಗ್ರಹಾಲಯವನ್ನಾಗಿ ಮಾಡಿ ೨೦೦೦ದಲ್ಲಿ ಅದನ್ನು ಇನ್ನಷ್ಟು ವಿಸ್ತರಿಸಲಾಯಿತು. ಇಲ್ಲಿ ೬ನೆಯ ಶತಮಾನದಿಂದ ಹಿಡಿದು ೧೫ನೆಯ ಶತಮಾನದ ವರೆಗಿನ ಎಲ್ಲ ಕಲಾಕೃತಿಗಳನ್ನು ಜೋಡಿಸಿಡಲಾಗಿದೆ. ಇಲ್ಲಿ ಒಟ್ಟು ಆರು ಗ್ಯಾಲರಿಗಳು ಮತ್ತು ಒಂದು ತೆರೆದ ಗ್ಯಾಲರಿಯಿದೆ. ಗಣೇಶ, ಸಪ್ತಮಾತೃಕೆಯರು, ಚೈತ್ಯದ ಕಮಾನುಗಳಲ್ಲಿ ಕುಳಿತ ಆಕೃತಿಗಳು, ಜೈನಶಿಲ್ಪಗಳು, ನಾಗ-ನಾಗಿಣಿಯರ ಆಕೃತಿಗಳಿವೆ. ಒಳಗೆ ಪ್ರವೇಶಿಸಿದ ಕೂಡಲೇ ಅಲ್ಲಿ ಸುಂದರವಾದ ಒಂದು ಅಂಬಿಕೆಯ ಪ್ರತಿಮೆಯಿದೆ. . ಮೊದಲ ಗ್ಯಾಲರಿಯಲ್ಲಿ ಬೌದ್ಧ, ಜೈನ, ಲಾಕುಲೀಸ, ಸಪ್ತಮಾತೃಕೆಯರು, ಗಣೇಶರ ಪ್ರತಿಮೆಗಳಿವೆ. ಬಲಬದಿಗೆ ಹೋದರೆ ಎರಡನೇ ಗ್ಯಾಲರಿಯಲ್ಲಿ ಶಿವ, ಅರ್ಧನಾರೀಶ್ವರ, ನಿಂತಿರುವ ವಿಷ್ಣು, ಮಾತೃಕೆಯರು, ದ್ವಾರಪಾಲಕರು ಇದ್ದಾರೆ. ಮೂರನೇ ಗ್ಯಾಲರಿಯಲ್ಲಿ ಕಾಲಭೈರವನ ಬೃಹತ್ ಪ್ರತಿಮೆಯಿದೆ. ನಾಲ್ಕನೇ ಗ್ಯಾಲರಿಯಲ್ಲಿ ಐಹೊಳೆಯ ಗ್ರಾಮದ ಒಂದು ಮಾದರಿಯಿದೆ. ತೆರೆದ ಗ್ಯಾಲರಿಯಲ್ಲಿ ಉತ್ಖನನದಲ್ಲಿ ದೊರೆತ ಇನ್ನಷ್ಟು ಶಿಲ್ಪಗಳಿವೆ. ಎಲ್ಲವನ್ನೂ ನೋಡಿ ಮುಗಿಸಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಊಟ ಮುಗಿಸಿ ವಾಪಸ್ ಹೋಟೆಲಿಗೆ ಬಂದು ವಿಶ್ರಾಂತಿ ತೆಗೆದುಕೊಂಡು ಅವಿಸ್ಮರಣೀಯ ನೆನಪುಗಳನ್ನು ಹೊತ್ತುಕೊಂಡು ರಾತ್ರಿ ಎಂಟು ಗಂಟೆಯ ಗಣೇಶ್ ಟ್ರಾವೆಲ್ಸ್ ಹಿಡಿದು ನಾನು ಊರಿಗೆ ಹಿಂತಿರುಗಿ ಬಂದೆ.
-ಪಾರ್ವತಿ ಜಿ.ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ



















