ಬೆಂಗಳೂರು: ನಗರದ ಹೊರವಲಯದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿಶೀಟರ್ (Rowdysheeter) ಗ್ಯಾಂಗ್ ಹಿಡಿಯಲು ಪೊಲೀಸರು (Police) ತೆರಳಿದ್ದ ಸಂದರ್ಭದಲ್ಲಿ ಅವರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಫೈರಿಂಗ್ ಮಾಡಿದ್ದಾರೆ.
ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನನ ಕಾಲಿಗೆ ಆನೇಕಲ್ ತಾಲ್ಲೂಕಿನ ಸರ್ಜಾಪುರ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಗುಂಡು ಹಾರಿಸಿದ್ದಾರೆ. ದೊಮ್ಮಸಂದ್ರದ ಹತ್ತಿರ ಆರೋಪಿ ಕುಳಿತುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದರು.
ಕಳೆದ ತಿಂಗಳು 28ರಂದು ರಾತ್ರಿ ಮಾಜಿ ರೌಡಿ ಶೀಟರ್ ವೆಂಕಟೇಶ್ ಅಲಿಯಾಸ್ ವೆಂಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಶ್ರೀನಿವಾಸ್ ಗ್ಯಾಂಗ್, ಆನಂತರ ತಲೆ ಮರೆಸಿಕೊಂಡಿತ್ತು. ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಹೀಗಾಗಿ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆಗ ರೌಡಿಶೀಟರ್ ಗುಬ್ಬಚ್ಚಿ ಸೀನ ಪೊಲೀಸ್ ಪೇದೆ ಇರ್ಫಾನ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಫೈರ್ ಮಾಡಿದ್ದಾರೆ. ರೌಡಿ ಶೀಟರ್ ಗುಬ್ಬಚ್ಚಿ ಸೀನನ ಕಾಲಿಗೆ ಗುಂಡೇಟು ಬಿದ್ದಿದ್ದು, ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾನೆ.