ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಗೆಲುವಿನ ಬೆನ್ನಲ್ಲೇ ಯೋಗೇಶ್ವರ್ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ. ಕುಮಾರಸ್ವಾಮಿ ಮನಸ್ಸು ಮಾಡಿದ್ದರೆ, ಮಂಡ್ಯ ಲೋಕಸಭೆಗೆ ನಿಖಿಲ್ ನನ್ನು ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಮಗನನ್ನು ಬಲಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವೇಗೌಡರು ದೈತ್ಯ ಶಕ್ತಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಈ ಕಾರಣದಿಂದ ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹೀಗಾಗಿ ಅವರು ವಿಶ್ರಾಂತಿ ಪಡೆಯಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಮಂಜುನಾಥ್ ಪರ ಕೆಲಸ ಮಾಡಿದ್ದೆ, ಅದರಿಂದಾಗಿ ಡಿಕೆ ಸುರೇಶ್ಗೆ ಸೋಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅದೇ ಡಿಕೆ ಸುರೇಶ್ ಹೆಗಲಿಗೆ ಹೆಗಲು ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ ಎಂದು ಡಿಕೆ ಬ್ರದರ್ಸ್ ಗೆ ಧನ್ಯವಾದ ಅರ್ಪಿಸಿದ್ದಾರೆ.
ದೇವೇಗೌಡರ ಕುಟುಂಬ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಅವರದ್ದು ಕೇವಲ ಸ್ವಾರ್ಥದ ರಾಜಕಾರಣ. ಜನಪರ ಕಾಳಜಿ ಇದ್ದಿದ್ದರೆ ಜನ ಬೆಂಬಲಿಸುತ್ತಿದ್ದರು. ಆದರೆ, ಅವರ ಕುಟುಂಬದ ಸ್ವಾರ್ಥದ ಬಗ್ಗೆ ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ಜನರು ತಿರಸ್ಕರಿಸಿದ್ದಾರೆ ಎಂದು ಗುಡುಗಿದ್ದಾರೆ.