ಆನೇಕಲ್: ಗಾಂಜಾ ಮತ್ತಿನಲ್ಲಿ ದುಷ್ಕರ್ಮಿಗಳ ಗುಂಪೊಂದು ರಸ್ತೆಯಲ್ಲಿ ಹೋಗುತ್ತಿದ್ದ ಶಿಕ್ಷಕರೊಬ್ಬರನ್ನು ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಆನೇಕಲ್ ಪಟ್ಟಣಕ್ಕೆ ಸಮೀಪದ ದಿಣ್ಣೆ ಹತ್ತಿರ ಈ ಘಟನೆ ನಡೆದಿದೆ. ಮುರುಳಿ(28) ಎಂಬ ಶಿಕ್ಷಕರ ಮೇಲೆ 6 ಜನರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಮುರುಳಿ ಖಾಸಗಿ ಸಂಸ್ಥೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ. ಮಧ್ಯಾಹ್ನ ಕಾವೇರಿ ಕಾಲೇಜು ಹತ್ತಿರ ಹೋಗಿದ್ದ ಸಂದರ್ಭದಲ್ಲಿ ಎರಡು ಬೈಕ್ ನಲ್ಲಿ ಬಂದಿದ್ದ ಆರು ಜನರ ತಂಡ, ಬೈಕ್ ನಲ್ಲೇ ಮುರುಳಿಯನ್ನು ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಿರಾತಕರು ಪೆನ್ ತೆಗೆದುಕೊಂಡು ಕೈ ಹಾಗೂ ಬೆನ್ನಿನ ಭಾಗಕ್ಕೆ ಚುಚ್ವಿದ್ದಾರೆ. ಭೀಕರವಾಗಿ ಹಲ್ಲೆ ನಡೆಸಿ ಮೊಬೈಲ್ ಪಾಸ್ ವರ್ಡ್ ಕೇಳಿದ್ದಾರೆ. ಆಗ ಫೋನ್ ಪೇನಲ್ಲಿದ್ದ ನೂರು ರೂಪಾಯಿಯನ್ನೂ ಆರೋಪಿಗಳು ಬಿಟ್ಟಿಲ್ಲ. ನಂತರ ಮನಬಂದಂತೆ ಥಳಿಸಿ, ಮುರುಳಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಆನಂತರ ಮುರುಳಿ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಹಿತರು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.