ದಾವಣಗೆರೆ: ಹೊನ್ನಳ್ಳಿ ತಾಲ್ಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಗರುಡ ಪಂಚಮಿಯಂದು ಕುಂಬಳೂರಿನ ಗಣಮಗ ದುಂಡ್ಯಪ್ಪ ಬಾಣವೇರಿ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿಯಲಾಯಿತು. ‘ಶಿಖರದ ತುದಿಗೆ ಘಟಸರ್ಪ ಆಡಿತ್ರಲೆ, ಭೂಲೋಕದ ಮುತ್ತು ಗಗನಕೇರಿತ್ರಲೆ, ಅದಕ್ಕೆ ನಾನಿದ್ದೀನಿ” ಎಂಬ ಭವಿಷ್ಯವಾಣಿಯನ್ನು ನುಡಿದರು.
ಅಂದರೆ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ವಿಶ್ಲೇಷಿಸಲಾಗುತ್ತಿದೆ. ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನುತ್ತಿದ್ದಾರೆ.
ಗ್ರಾಮದ ಹೆಳವನಕಟ್ಟೆ ಗಿರಿಯಮ್ಮನ ಐಕ್ಯ ಸ್ಥಳ ಹಾಗೂ ಆಂಜನೇಯ ಸ್ವಾಮಿಯ ದೇವಾಲಯದ ಆವರಣದಲ್ಲಿ ಸುತ್ತಮುತ್ತಲ ಗ್ರಾಮಗಳ ದೇವಾನು ದೇವತೆಗಳು ಸಮ್ಮುಖದಲ್ಲಿ ಅದ್ಧೂರಿ ಜಾತ್ರೆ ನಡೆಯಿತು.
ಜಾತ್ರೆಯಲ್ಲಿ ನವ ದಂಪತಿಗಳು, ಬುಡ ಮೇಲಾದ ಇತಿಹಾಸ ಪ್ರಸಿದ್ಧ ಹುಣಸೆ ಮರಕ್ಕೆ ಮಂಡಕ್ಕಿ ಎರಚಿ, ಆಂಜನೇಯ ಸ್ವಾಮಿಯ ದರ್ಶನ ಪಡೆದರು.


















