ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ. ಪ್ರಭಾಕರ್ ಇಹಲೋಕ ತ್ಯಜಿಸಿದ್ದಾರೆ.
ಕೆ.ಪ್ರಭಾಕರ್ ಅವರು ಮಂಗಳವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತವಾಗುತ್ತಿದ್ದಂತೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕೆ. ಪ್ರಭಾಕರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಹಿರಿಯ ನಿರ್ಮಾಪಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ.
ಚಂದನವನದ ಅಂಗಳದಲ್ಲಿ ಸಭ್ಯ ನಿರ್ಮಾಪಕ ಎಂದೇ ಕೆ.ಪ್ರಭಾಕರ್ ಗುರುತಿಸಿಕೊಂಡಿದ್ದಾರೆ. ಸ್ಟಾರ್ ಕಲಾವಿದರ ಜೊತೆ ಅವರು ಸಿನಿಮಾ ಮಾಡಿದ್ದರು. ಕಾಶಿನಾಥ್, ಶಿವರಾಜ್ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಹಲವಾರು ಕಲಾವಿದರಿಗೆ ವರು ಬಂಡವಾಳ ಹೂಡಿದ್ದಾರೆ. ಹಲವು ಸಿನಿಮಾಗಳ ಮೂಲಕ ಅವರು ಹೆಸರು ಗಳಿಸಿದ್ದರು.
ಕಾಶಿನಾಥ್-ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’, ವಿಷ್ಣುವರ್ಧನ್-ಪ್ರೇಮಾ ಅಭಿನಯದ ‘ಎಲ್ಲರಂಥಲ್ಲ ನನ್ನ ಗಂಡ’, ಶಿವರಾಜ್ಕುಮಾರ್-ರಾಧಿಕಾ ಕುಮಾರಸ್ವಾಮಿ ನಟಿಸಿದ ‘ಅಣ್ಣ-ತಂಗಿ’, ಉಪೇಂದ್ರ-ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ ‘ಲವ-ಕುಶ’, ವಿಷ್ಣುವರ್ಧನ್ ನಟನೆಯ ‘ತುಂಬಿದ ಮನೆ’, ಅಂಬರೀಷ್-ಮಾಲಾಶ್ರೀ ಅಭಿನಯದ ‘ಸೋಲಿಲ್ಲದ ಸರದಾರ ಸೇರಿದಂತೆ ಹಲವಾರು ಉತ್ತಮ ಚಿತ್ರಗಳನ್ನು ಅವರು ನಿರ್ಮಿಸಿದ್ದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.