ವಿಜಯಪುರ: ಕಿಡಿಗೇಡಿಗಳು ಜಾತ್ರೆ ಸಂದರ್ಭದಲ್ಲಿಯೇ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಚಿಂತಾಜನಕ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಹತ್ತಿರ ನಡೆದಿದೆ. ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರು ಅಪಾಯಕಾರಿ ಸ್ಟಂಟ್ ಗೆ ಬಲಿಯಾಗಿದ್ದಾರೆ.
ಸಾವನ್ನಪ್ಪಿದ ಯುವಕರೆಲ್ಲ ಮಲಗಲದಿನ್ನಿ ಗ್ರಾಮದವರು ಎನ್ನಲಾಗಿದೆ. ಗ್ರಾಮದ ಹತ್ತಿರದ ಕುಂಟೋಜಿ ಎಂಬ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಜಾತ್ರೆ ನೋಡಲು ಯುವಕರು ಅಲ್ಲಿಗೆ ಬಂದಿದ್ದಾರೆ.
ಜಾತ್ರೆಯ ಅಂಗವಾಗಿ ವಿವಿಧ ಶಕ್ತಿ ಪ್ರದರ್ಶನದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆ ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಯುವಕರು, ಜನರು ಆಗಮಿಸಿದ್ದರು. ಈ ವೇಳೆ ಯುವಕರು ಬೈಕ್ ವ್ಹೀಲಿಂಗ್ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಯ ತಪ್ಪಿ ರಸ್ತೆಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರ ಮೇಲೆ ವೇಗವಾಗಿ ಹೋಗಿ ಬೈಕ್ ಗುದ್ದಿದ್ದಾರೆ.
ಪರಿಣಾಮ ಪರಿಣಾಮ ಬೈಕ್ ಸವಾರರೂ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನುಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.