ಹಾವೇರಿ: ಜಿಲ್ಲೆಯ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ದಸರಾ ಹಬ್ಬದ ಕಾರ್ಣಿಕೋತ್ಸವ ನುಡಿಯಲಾಗಿದೆ. ‘ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್’ ಎಂದು ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ.
9 ದಿನ ಉಪವಾಸವಿದ್ದು, 18 ಅಡಿ ಬಿಲ್ಲನ್ನೇರಿದ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವಿಷ್ಯವಾಣಿ ನುಡಿದಿದ್ದಾರೆ. ಗೊರವಯ್ಯ ನುಡಿದ ‘ಕಾರ್ಣಿಕವನ್ನು ದೇವರಗುಡ್ಡದಲ್ಲಿ ಮಾಲತೇಶಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅರ್ಥ ಬಿಡಿಸಿದ್ದಾರೆ.
ಆಕಾಶದತ್ತ ಚಿಗುರಿತಲೇ ಅಂದರೆ ಒಳ್ಳೆ ಮಳೆ ಆಗುತ್ತದೆ. ಬೇರು ಮುದ್ದಾಯಿತಲೇ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತದೆ. ಅದನ್ನ ತೆಗೆದುಕೊಳ್ಳುವ ಫಲಾನುಭವಿಗಳಿಗೂ ಒಳ್ಳೆದಾಗುತ್ತದೆ ಎಂದು ವಿಶ್ಲೇಷಣೆ ಮಾಡಬಹುದು ಎಂದು ಹೇಳಿದ್ದಾರೆ.