ತುಮಕೂರು : ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ಇಂದು ನಡೆದ ಲಿಂ. ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಮಠದ ಗುಣಗಾನ ಮಾಡಿದ್ದಾರೆ.
ಈ ದೇಶದ ಸಾಧು ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಶಿವಕುಮಾರ ಶ್ರೀಗಳು ಮೇಲ್ಪಂಕ್ತಿಯಲ್ಲಿ ಇರುತ್ತಾರೆ. ಅನಾಥ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ಕೊಟ್ಟು ಅನಾಥರ ಪಾಲಿನ ಅಪ್ಪ ಎನಿಸಿಕೊಂಡಿದ್ದಾರೆ. ದಯೆಯೇ ಧರ್ಮದ ಮೂಲವಯ್ಯ ಎನ್ನುವಂತೆ ಸಿದ್ದಗಂಗಾ ಮಠವು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೀತಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಿದ್ದಗಂಗಾ ಮಠದ ಪಾತ್ರ ಪ್ರಮುಖವಾಗಿದೆ ಎಂದು ಸೇವಾ ಕಾರ್ಯವನ್ನು ದ್ರೌಪದಿ ಮುರ್ಮು ಕೊಂಡಾಡಿದ್ದಾರೆ.

ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್, ಮಾನವತಾ ಕಲ್ಯಾಣಕ್ಕಾಗಿ ದುಡಿದ ಶಿವಕುಮಾರ ಶ್ರಿಗಳ ಸೇವೆ ಅನನ್ಯವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದ್ದಾರೆ.
ಇನ್ನು, ಸ್ವಾಮೀಜಿ ಮನ್ಯಷ್ಯನಿಂದ ಮಹದೇವರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ಪ್ರಸಿದ್ಧಿಯಾಗಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗಿ ಸಿದ್ಧಗಂಗಾ ಮಠ ಜನಪರ ಕೆಲಸ ಮಾಡಿದೆ ಎಂದಿದ್ದಾರೆ.
ಸಿದ್ಧಗಂಗಾ ಮಠ ಕೇವಲ ಧರ್ಮ ಕ್ಷೇತ್ರವಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕ್ಷೇತ್ರ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಶ್ರೀಗಳ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನ ಮೂರ್ತಿಯನ್ನ ಸಿದ್ದಲಿಂಗ ಸ್ವಾಮೀಜಿ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ : ಹಾವೇರಿ ಬಸ್ ದುರಂತ – ಚಿಕಿತ್ಸೆ ಫಲಿಸದೆ 2 ವರ್ಷದ ಕಂದಮ್ಮ ಸಾವು!



















