ಗದಗ: ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಕಂಡ ಕಂಡವರ ಮೇಲೆ ಚಾಕು ಇರಿದಿದ್ದಾರೆ.
ನಗರದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಜುಮ್ಮಾ ಮಸೀದಿ ಹತ್ತಿರ ಕ್ಷುಲ್ಲಕ ಕಾರಣಕ್ಕೆ ಆರು ಜನರಿಗೆ ಚೂರಿಯಿಂದ ಇರಿಯಲಾಗಿದೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅನಿಲ್ ಮುಳ್ಳಾಳ್ ಹಾಗೂ ವಿನಾಯಕ್ ಮುಳ್ಳಾಳ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ ಡಿಎಂಗೆ ದಾಖಲಿಸಲಾಗಿದೆ.
ಡಿ. 20 ರಂದು, ಚೇತನ್ ಮುಳ್ಳಾಳ್ ಮತ್ತು ನಿಸಾರ್ ಅಹ್ಮದ್ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ. ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ಅದೇ ಕಾರಣಕ್ಕೆ ಈಗ ಮತ್ತೆ ಘರ್ಷಣೆ ಸಂಭವಿಸಿದೆ.
ಡಿ. 20ರಂದು ನಿಸಾರ್ ಹಾಗೂ ಚೇತನ್ ಗಲಾಟೆ ಮಾಡಿಕೊಂಡಿದ್ದರು. ಈ ದ್ವೇಷ ಮತ್ತೆ ಮುಂದುವರೆದಿದ್ದು, ಡಿ. 26ರಂದು ಗುರುವಾರ ಜುಮ್ಮಾ ಮಸೀದಿ ಬಳಿ ನಿಸಾರ್ ನನ್ನು ಚೇತನ್ ನೋಡಿದ್ದ. ನಿಸಾರ್ ನನ್ನು ತೋರಿಸಿ, ಇವನೇ ಗಲಾಟೆ ಮಾಡಿದ್ದ ಎಂದು ಅಣ್ಣ ಅನಿಲ್ ಗೆ ಹೇಳಿದ್ದಾನೆ. ಆಗ ಅನಿಲ್, ನಿಸಾರ್ ನನ್ನು ಪ್ರಶ್ನಿಸಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಚೇತನ್ ಹಾಗೂ ಸ್ಥಳಕ್ಕೆ ಬಂದಿದ್ದ ವಿನಾಯಕ್ ಮೇಲೆ ನಿಸಾರ್ ಹಲ್ಲೆ ನಡೆಸಿದ್ದಾನೆ.
ವಿನಾಯಕ್ ನನ್ನು ರಕ್ಷಿಸಲು ಬಂದ ಅನಿಲ್ ಕುತ್ತಿಗೆಗೆ ಸ್ಕ್ರೂ ಡ್ರೈವರ್ ಚುಚ್ಚಿದ್ದಾನೆ. ಜೊತೆಗೆ ಸ್ಥಳದಲ್ಲಿದ್ದ ಐದು ಜನರಿಗೂ ಚೂರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ನಿಸಾರ್ ಜೊತೆಗೆ ಸುಮಾರು 20 ರಿಂದ 30 ಜನರ ಗ್ಯಾಂಗ್ ಕೂಡ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.