ಉಡುಪಿ: ಇತ್ತೀಚೆಗೆ ಬಹುತೇಕ ರೀಲ್ಸ್ ಹುಚ್ಚಿಗೆ ಬಿದ್ದಿದ್ದಾರೆ. ಹಲವರಂತೂ ಅದರಲ್ಲಿಯೇ ಮುಳುಗಿ ಬದುಕು ಹಾಳು ಮಾಡಿಕೊಳ್ಳುತ್ತಿರುವ ಘಟನೆ ನಮ್ಮ ಮುಂದೆ ನಡೆಯುತ್ತಲೇ ಇವೆ. ಈಗ ಅಂತಹುದೇ ಘಟನೆಯೊಂದು ಕೊಲೆಗೆ ಕಾರಣವಾಗಿದೆ.
ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೇವಲ 16 ಫಾಲೋವರ್ಸ್ ಹೊಂದಿದ್ದ ಪತ್ನಿ ರೀಲ್ಸ್ ಹುಚ್ಚಿಗೆ ಸಾವಿನ ಮನೆ ಸೇರಿದ್ದಾಳೆ. ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಬೀದರ್ ಮೂಲದ ಜಯಶ್ರೀ ಕೊಲೆಯಾಗಿರುವ ಮಹಿಳೆ. ಪತಿ ಕಿರಣ್ ಉಪಾಧ್ಯಾಯ ಕೊಲೆ ಮಾಡಿರುವ ಆರೋಪಿ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ದಂಪತಿ ಕಳೆದ 9 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ತಾರಾನಾಥ ಹೊಳ್ಳ ಅವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ಹುಚ್ಚು. ಆದರೆ, ಪತಿ ಇದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಈ ವಿಚಾರಕ್ಕಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.
ಆದರೆ, ಗುರುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಶುರವಾಗಿದೆ. ಆದರೆ, ಅದು ವಿಕೋಪಕ್ಕೆ ತೆರಳಿದೆ. ಶುಕ್ರವಾರ ಬೆಳಿಗ್ಗೆ ಪತಿ ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿನ ನಡೆಸಿ ಆರೋಪಿ ಪತಿ ಕಿರಣ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.


















