ಉತ್ತರಪ್ರದೇಶ: ಇತ್ತೀಚೆಗೆ ಪ್ರತಿಯೊಬ್ಬರೂ ರೀಲ್ಸ್ ನಲ್ಲಿ ಮುಳುಗೇಳುತ್ತಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವೃದ್ಧವರೆಗೂ ಈಗ ರೀಲ್ಸ್ ಹುಚ್ಚು ಹೆಚ್ಚಾಗಿದೆ. ಇದರಿಂದ ಸಾಕಷ್ಟು ಅವಾಂತರಗಳು ನಡೆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗೆ ರೀಲ್ಸ್ ಹುಚ್ಚಿಗೆ ಬಿದ್ದ ಬಾಲಕಿ 6ನೇ ಮಹಡಿಯಿಂದ ಬಿದ್ದು ಜೀವಕ್ಕೆ ಕುತ್ತು ತಂದುಕೊಂಡಿರುವ ಘಟನೆ ನಡೆದಿದೆ.
ರೀಲ್ಸ್ ಮಾಡಲು ಹೋಗಿ 6ನೇ ಮಹಡಿಯಿಂದ ಬಿದ್ದ ಘಟನೆ ಘಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಡೆದಿದೆ. 6ನೇ ಮಹಡಿಯಿಂದ ಬಿದ್ದ ರಭಸಕ್ಕೆ ಬಾಲಕಿ ತೀವ್ರ ಗಾಯಗೊಂಡಿದ್ದು, ನೋವು ತಡೆಯಲಾಗದೇ ಕಿರುಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೋನಿಶಾ (16) ಎಂದು ಗುರುತಿಸಲಾದ ಬಾಲಕಿ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್-9 ಸೊಸೈಟಿಯ ತನ್ನ ಮನೆಯಲ್ಲಿ ರೀಲ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 6ನೇ ಮಹಡಿಯಿಂದ ಬಿದ್ದಿದ್ದಾಳೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
@lavelybakshi ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು , ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 13ರಂದು ಹಂಚಿಕೊಂಡಿರುವ ವಿಡಿಯೋ ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ಪ್ರಾಣಕ್ಕೆ ಕುತ್ತು ತರುವಷ್ಟರ ಮಟ್ಟಿಗೆ ರೀಲ್ಸ್ ಹುಚ್ಚು ಬೆಳೆಸಿಕೊಳ್ಳಬೇಡಿ ಎಂದು ಹಲವರು ಹೇಳುತ್ತಿದ್ದಾರೆ.