ತಿರುಪತಿಯಲ್ಲಿ ಬುಧವಾರ ರಾತ್ರಿ ದೇವಸ್ಥಾನದ ಇತಿಹಾಸವೇ ಕಂಡರಿಯದ ಕಾಲ್ತುಳಿತ ಸಂಭವಿಸಿದೆ. ಘಟನೆಗೆ ದೇಶವೇ ಬೆಚ್ಚಿ ಬಿದ್ದಿದೆ. ಇದು ಹೇಗೆ ನಡೆಯಿತು, ಯಾಕೆ ನಡೆಯಿತು ಮತ್ತು ಯಾರು ಹೊಣೆಗಾರರು ಎಂಬ ಪ್ರಶ್ನೆಗಳು ಭಕ್ತರ ಮನಸ್ಸಿನಲ್ಲಿ ಮೂಡಿವೆ.
ತಿರುಮಲ ದೇವಸ್ಥಾನದಲ್ಲಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವುದಕ್ಕೆ ಜನರು ಸರತಿ ಸಾಲಿನಲ್ಲಿ ನಿಂತಿದ್ದಾಗ ಘಟನೆ ಸಂಭವಿಸಿದೆ. ಕಾಲ್ತುಳಿತದಲ್ಲಿ ಆರು ಭಕ್ತರು ಮೃತಪಟ್ಟಿದ್ದಾರೆ. ಅದಕ್ಕೆ ಕಾರಣ ಅಧಿಕಾರಿಗಳ ತಪ್ಪು ಗ್ರಹಿಕೆ ಎಂದೇ ಮೊದಲಾಗಿ ಹೇಳಬಹುದು. ಸಾಲಿನಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು ಅವರನ್ನು ರಕ್ಷಿಸಲು ಗೇಟ್ ತೆರೆದಿದ್ದೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ 40 ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಕುಂಠ ದ್ವಾರದ ದರ್ಶನಕ್ಕೆ ಟೋಕನ್ ಪಡೆಯಲು 4,000ಕ್ಕೂ ಹೆಚ್ಚು ಭಕ್ತರು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಗೊಂದಲ ಮತ್ತು ಕೋಲಾಹಲ ಸೃಷ್ಟಿಸಿತು. ಗುರುವಾರ ಬೆಳಗ್ಗಿನಿಂದ ಟಿಕೆಟ್ ವಿತರಣೆಯಾಗಿದ್ದರೂ ಭಕ್ತರು ಬುಧವಾರದಿಂದಲೇ ಸಾಲಿನಲ್ಲಿ ನಿಂತಿದ್ದರು. ಜನದಟ್ಟಣೆ ಮತ್ತು ಆಡಳಿತ ಲೋಪವೇ ಕಾಲ್ತುಳಿತ ಉಂಟಾಗಲು ಮತ್ತು ಕನಿಷ್ಠ ಆರು ಜನರು ಮೃತಪಡಲು ಕಾರಣ.
ಬೈರಾಗಿ ಪಟ್ಟೆಡಾ ಪಾರ್ಕ್‌ನ ಟೋಕನ್ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದವರೇ ನತದೃಷ್ಟರು. ಈ ಗುಂಪಿನಲ್ಲಿ ಮಲ್ಲಿಕಾ ಎಂಬುವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಒಂದು ಗೇಟ್ ಪೊಲೀಸರು ತೆರೆದಿದ್ದಾರೆ. ತಕ್ಷಣ ಅಲ್ಲಿದ್ದ ಉಳಿದ ಭಕ್ತರು ಗೇಟ್ ತೆರೆದಿರುವ ಲಾಭ ಪಡೆದು ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ಇದು ನೂಕುನುಗ್ಗಲು ಮತ್ತು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಸಿವೆ.
91 ಕೌಂಟರ್‌ಗಳು ಓಪನ್
ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ, ಗುರುವಾರ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದಟೋಕನ್‌ಗಳ ವಿತರಣೆಗೆ 91 ಕೌಂಟರ್‌ಗಳನ್ನು ತೆರೆಯಲಾಗಿತ್ತು, ಅದಕ್ಕಾಗಿ ಸಾಲಿನಲ್ಲಿ ನಿಂತಿದ್ದವರು ನೂಕು ನುಗ್ಗಲು ಮಾಡಿದ್ದಾರೆ ಎಂದು ಹೇಳಿದ್ದಾರೆ.
“ಕಾಲ್ತುಳಿತದಲ್ಲಿ ಆರು ಭಕ್ತರು ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ನಾವು ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುತ್ತಿದ್ದೇವೆ. ಟಿಟಿಡಿಯ ಇತಿಹಾಸದಲ್ಲಿ ಇಂಥ ದುರ್ಘಟನೆ ಮೊದಲ ಬಾರಿ ಸಂಭವಿಸಿದೆ. ಈ ಬಗ್ಗೆ ತಿರುಪತಿಯ ಭಕ್ತರಲ್ಲಿ ಈ ಕುರಿತು ಕ್ಷಮೆ ಕೋರುವೆ. ನಾವು ತನಿಖೆ ನಡೆಸಿ ಗಂಭೀರ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಗಲಾಟೆಯ ಸಮಯದಲ್ಲಿ ಜನರು ಪರಸ್ಪರ ತಳ್ಳುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಜನಸಮೂಹ ನಿಯಂತ್ರಣ ಮಾಡಲು ಯತ್ನಿಸಿದರು. ಆದಾಗ್ಯೂ ಜನರ ಸಂಖ್ಯೆ ಹಚ್ಚಿದ್ದ ಕಾರಣ ನಿಭಾಯಿಸಲು ಕಷ್ಟವಾಯಿತು. ಕಾಲ್ತುಳಿತ ಸಂಭವಿಸಿದ ನಂತರ ಗಾಯಗೊಂಡ ಭಕ್ತರಿಗೆ ಪೊಲೀಸರು ತುರ್ತು ಚಿಕಿತ್ಸೆ ನೀಡುತ್ತಿರುವ ವೀಡಿಯೊಗಳು ವೈರಲ್ ಆಗಿವೆ. ಅಲ್ಲಿದ್ದವರು ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ರಾಜ್ಯ ಆರೋಗ್ಯ ಸಚಿವರು ಇಂದು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಿಎಂ ಬೆಳಗ್ಗೆಯೇ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.
ಕರ್ತವ್ಯ ಲೋಪದ ಆರೋಪ
“ಆಡಳಿತ ಲೋಪದಿಂದಾಗಿ ಘಟನೆ ಸಂಭವಿಸಿದೆ ಎಂದು ನಾವು ಅಂದುಕೊಂಡಿದ್ದೇವೆ. ಡಿಎಸ್ಪಿ ಒಂದು ಪ್ರದೇಶದಲ್ಲಿ ಗೇಟ್ ತೆರೆದ ತಕ್ಷಣ ಉಳಿದವರು ಅಲ್ಲಿಗೆ ಓಡಿಹೋದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ಬಿ. ಆರ್ ನಾಯ್ಡು ಹೇಳಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಟೋಕನ್‌ಗಳಿಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ಘಟನೆ ಸಂಭವಿಸಿರುವುದು ಬೇಸರದ ವಿಷಯ,ʼʼ ಎಂದು ಟ್ವೀಟ್ ಮಾಡಿದ್ದಾರೆ.
“ಸ್ಥಳಕ್ಕೆ ಹೋಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಿಸಲಾಗಿದೆ. ನಾನು ಕಾಲಕಾಲಕ್ಕೆ ಜಿಲ್ಲಾ ಮತ್ತು ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ನಾನು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ” ಎಂದು ಸಿಎಂ ಟ್ವೀಟ್ ಮೂಲಕ ಹೇಳಿದ್ದಾರೆ.

ಟಿಕೆಟ್ ಇದ್ದವರಿಗೆ ಮಾತ್ರ ವೈಕುಂಠ ದ್ವಾರದ ಟೋಕನ್
ದರ್ಶನ ಟೋಕನ್ ಅಥವಾ ಟಿಕೆಟ್ ಹೊಂದಿರುವ ಭಕ್ತರಿಗೆ ಮಾತ್ರ ನಿಗದಿತ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶ ನೀಡಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿಜನ ನಿಂತಿದ್ದರು ಎನ್ನಲಾಗಿದೆ. ಸೀಮಿತ ವಸತಿ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜೆ ಶ್ಯಾಮಲಾ ರಾವ್ ಈ ನಿರ್ದಿಷ್ಟ ಟೋಕನ್ ನೀಡುವುದಾಗಿ ಹೇಳಿದ್ದರು.
ತಿರುಪತಿಯಲ್ಲಿ 1,200 ಮತ್ತು ತಿರುಮಲದಲ್ಲಿ 1,800 ಸೇರಿದಂತೆ ತಿರುಪತಿ ಮತ್ತು ತಿರುಮಲದಾದ್ಯಂತ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಷ್ಟೊಂದು ಭಕ್ತರು ಏಕಾಏಕಿ ಬಂದಿದ್ದು ಯಾಕೆ?
ಜನವರಿ 10ರಿಂದ 19ರವರೆಗೆ ತಿರುಮಲ ಶ್ರೀವಾರಿ ಆಲಯಂನಲ್ಲಿ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಟಿಟಿಡಿ ಘೋಷಿಸಿದ ಕಾರ್ಯಕ್ರಮದ ಪ್ರಕಾರ, ಜನವರಿ 10 ರಿಂದ 19 ರವರೆಗೆ 10 ದಿನಗಳ ಕಾಲ ವೈಕುಂಠ ದ್ವಾರಗಳನ್ನು ತೆರೆದಿಡಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಸರ್ವದರ್ಶನ ಆರಂಭವಾಗಲಿದೆ. ಜನವರಿ 10ರಂದು ವೈಕುಂಠ ಏಕಾದಶಿಯಂದು ಬೆಳಿಗ್ಗೆ 9 ರಿಂದ 11 ರವರೆಗೆ ದೇವಾಲಯದ ನಾಲ್ಕು ಬೀದಿಗಳಲ್ಲಿ ಚಿನ್ನದ ರಥೋತ್ಸವ ನಡೆಯಲಿದೆ. ಜನವರಿ 11 ರಂದು ವೈಕುಂಠ ದ್ವಾದಶಿಯಂದು ಬೆಳಿಗ್ಗೆ 5.30 ರಿಂದ 6.30 ರವರೆಗೆ ಚಕ್ರಸ್ನಾನ ನಡೆಯಲಿದೆ. ಉತ್ಸವ ವೀಕ್ಷಿಸಲು ಭಕ್ತರು ಟೋಕನ್ ಗಳಿಗಾಗಿ ತಿರುಪತಿಗೆ ಬಂದಿದ್ದರು.