ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಒಣಹವೆಯ ವಾತಾವರಣ ಮುಂದುವರಿದಿದೆ. ಆದರೆ ಇಂದು ಕರಾವಳಿ ಸೇರಿದಂತೆ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಕೆಲವು ದಿನಗಳವರೆಗೆ ಶುಷ್ಕ ವಾತಾವರಣ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ತುಂತುರು ಮಳೆ?
ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅದರ ಜೊತೆಗೆ ದಕ್ಷಿಣ ಒಳನಾಡಿನ ಕೊಡಗು, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯ ನಿರೀಕ್ಷೆ ವ್ಯಕ್ತವಾಗಿದೆ.
ಎಲ್ಲೆಲ್ಲಿ ಒಣ ಹವೆ?
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಾಮರಾಜನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ.
ಇನ್ನೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೂಡ ಕಳೆದ ಹಲವು ದಿನಗಳಿಂದ ಇರುವ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ ಎರಡನೇ ವಾರದ ಬಳಿಕ ತಾಪಮಾನ ಏರಿಕೆ
ಮಾರ್ಚ್ ಎರಡನೇ ವಾರದ ಬಳಿಕ ಬೆಂಗಳೂರಿನಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು ಎಂದು ಸೂಚಿಸಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ವೈದ್ಯರು ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರಿಗರಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳು ಕಾಣಿಸುತ್ತಿವೆ.
ಇದನ್ನೂ ಓದಿ : ಖಾಲಿ ಹುದ್ದೆ ಭರ್ತಿಗೆ ಇಲ್ಲ ‘ಗ್ಯಾರಂಟಿ’!


















