ಜಕಾರ್ತ: ತನ್ನ ಮಗುವಿಗೆ ಔಷಧಿ ತರಲು ಹೋಗಿದ್ದ ಮಹಿಳೆಯನ್ನೇ ಹೆಬ್ಬಾವು ನುಂಗಿರುವ ಘಟನೆಯೊಂದು ವರದಿಯಾಗಿದೆ.
ಮಧ್ಯ ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮೂಲಕ ಪ್ರಾಂತ್ಯದಲ್ಲಿ ತಿಂಗಳೊಳಗೆ 2ನೇ ಹೆಬ್ಬಾವನ್ನು ಸಾಯಿಸಲಾಗಿದೆ.
ಸಿರಿಯಾತಿ (36) ಹೆಬ್ಬಾವಿಗೆ ಬಲಿಯಾಗಿರುವ ಮಹಿಳೆ. ಮಂಗಳವಾರ ಬೆಳಿಗ್ಗೆ ತನ್ನ ಮಗುವಿಗೆ ಔಷಧಿ ತರುವುದಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಆ ನಂತರ ಅವರು ನಾಪತ್ತೆಯಾಗಿದ್ದರು. ಹೀಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು.

ಹುಟುಕಾಟ ನಡೆಸಿದ್ದ ಸಂದರ್ಭದಲ್ಲಿ ಮಹಿಳೆಯ ಪತಿಗೆ ತಮ್ಮ ಮನೆಯಿಂದ ಸುಮಾರು ದೂರದಲ್ಲಿ ಮಹಿಳೆಯ ಚಪ್ಪಲಿ ಹಾಗೂ ಪ್ಯಾಂಟ್ ಸಿಕ್ಕಿದೆ. ಹಾಗೆ ಹುಡುಕಾಟ ಮುಂದುವರೆಸಿದಾಗ ಹಾವು ಪತ್ತೆಯಾಗಿದೆ. ಅದು ಇನ್ನೂ ಜೀವಂತವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಹಾವನ್ನು ಸರಿಯಾಗಿ ಗಮನಿಸಿದಾಗ ಅದರ ಹೊಟ್ಟೆ ದೊಡ್ಡದಾಗಿತ್ತು. ಹೀಗಾಗಿ ಗ್ರಾಮದ ಹಲವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಗ್ರಾಮದ ಮುಖ್ಯಸ್ಥ, ಗ್ರಾಮದ ಜನರ ಸಹಾಯದಿಂದ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಿದ್ದಾರೆ. ಈ ವೇಳೆ ಸಿರಿಯಾತಿಯ ಮೃತದೇಹ ಪತ್ತೆಯಾಗಿದೆ.
