ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಕಳೆದ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಆನಂತರ ಅವರಿಗೆ ಸಂಬಂಧಿಸಿದ ಆಸ್ತಿ ಬಗ್ಗೆ ದೊಡ್ಡ ವಿವಾದವೇ ತಲೆ ದೋರಿತ್ತು. ಈ ವಿವಾದ ಈಗ ಸುಖಾಂತ್ಯ ಕಂಡಿದೆ.
ಅವರ ಎರಡನೇ ಪತ್ನಿ ಅನುರಾಧ ಹಾಗೂ ಮೊದಲ ಪತ್ನಿಯ ಮಕ್ಕಳಾದ ರಾಕಿ, ರಿಕ್ಕಿ ರೈ ಮಧ್ಯೆ ಈ ವಿವಾದ ನಡೆದಿತ್ತು. ಆಸ್ತಿಗಾಗಿ ಅನುರಾಧಾ ಅವರು ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆದರೂ, ಎರಡೂ ಕಡೆಯಿಂದ ಮಾತುಕತೆ ನಡೆದು ಆಸ್ತಿಪಾಲು ವಿವಾದ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದು ವರದಿಯಾಗಿದೆ.
ಮುತ್ತಪ್ಪ ರೈ ಅವರಿಗೆ ಸೇರಿದ ಆಸ್ತಿಯು ಬೆಂಗಳೂರು ಹೊರವಲಯದಲ್ಲಿನ ದೇವನಹಳ್ಳಿ, ಮೈಸೂರು, ಮಂಗಳೂರಿನಲ್ಲಿ ಇತು. ಒಟ್ಟಾರೆ ಮಾರುಕಟ್ಟೆ ಬೆಲೆ 2,000 ಕೋಟಿ ರೂ. ಗಳು ಎಂದು ಅಂದಾಜಿಸಲಾಗಿದೆ. ಈ ಕುರಿತು ರೈ ವಿಲ್ ಮಾಡಿಸಿದ್ದರು. ತಮ್ಮ ಮೊದಲ ಪತ್ನಿಯ ಇಬ್ಬರು ಮಕ್ಕಳಿಗೆ ಏನೇನು ಆಸ್ತಿ ಹೋಗಬೇಕು, ತಮ್ಮ ಜೀವಿತಾವಧಿಯ ಕೊನೆಗಾಲದಲ್ಲಿ ತಮ್ಮ ಕೈ ಹಿಡಿದ ಎರಡನೇ ಪತ್ನಿಗೆ ಎಷ್ಟು ಆಸ್ತಿ ಹೋಗಬೇಕು ಎಂಬುವುದನ್ನು ಅವರು ಅದರಲ್ಲಿ ಉಲ್ಲೇಖಿಸಿದ್ದರು.
ಆದರೆ, ರೈ ಅವರ ಕಾಲಾನಂತರ ಅವರ ಎರಡನೇ ಪತ್ನಿ ಅನುರಾಧಾ ಅವರು ಸಮಸ್ತ ಆಸ್ತಿಯಲ್ಲಿ ತಮಗಿನ್ನೂ ಹೆಚ್ಚು ಬರಬೇಕಿದೆ ಎಂದು ದಾವೆ ಹೂಡಿದ್ದರು. ಆದರೆ, ನ್ಯಾಯಾಲಯದಲ್ಲಿ ಪ್ರತಿವಾದ ಮಂಡಿಸಿದ್ದ ರಾಕಿ ಹಾಗೂ ರಿಕ್ಕಿ, ತಮ್ಮ ತಂದೆಯ ಕಾಲದಲ್ಲೇ ಅವರಿಗೆ ಏನು ಬೇಕೋ ಅದನ್ನು ಕೊಡಲಾಗಿದೆ. ಚಿನ್ನದ ಆಭರಣಗಳು, ಒಂದು ಕಾರು, ದೊಡ್ಡ ಮೊತ್ತದ ನಗದು, ಎಚ್ ಡಿ ಕೋಟೆಯಲ್ಲಿ ಒಂದು ಸ್ಥಿರಾಸ್ತಿ, ಬೆಂಗಳೂರಿನ ಸಹಕಾರ ನಗರದಲ್ಲಿ ಎರಡು ಮಹಡಿಗಳ ಒಂದು ಕಟ್ಟಡ – ಇಷ್ಟನ್ನೂ ನೀಡಲಾಗಿದೆ ಎಂದು ಹೇಳಿದ್ದರು. ಸದ್ಯ ಪರಸ್ಪರ ಮಾತುಕತೆಯಿಂದಾಗಿ ಆಸ್ತಿ ವಿವಾದ ಸುಖಾಂತ್ಯ ಕಂಡಿದೆ ಎಂದು ವರದಿಯಾಗಿದೆ.