ನವದೆಹಲಿ : ಹೊಸ ವರ್ಷದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ 2047ರ ‘ಅಭಿವೃದ್ಧಿ ಹೊಂದಿದ ಭಾರತ’ಕ್ಕೆ ನೀಲನಕ್ಷೆ ನೀಡಿದ್ದಾರೆ. ಅಲ್ಲದೇ, ಸರ್ವರಿಗೂ ಅಭಿವೃದ್ಧಿ ಮತ್ತು ಅವಕಾಶ ಒಳಗೊಂಡ ಭವಿಷ್ಯ ಸೃಷ್ಟಿಸಲು ಕರೆ ನೀಡಿದ್ದಾರೆ.
2047ರ ವಿಕಸಿತ ಭಾರತ’ದ ಕನಸು ನನಸಾಗಿಸಲು ಮತ್ತಷ್ಟು ಶ್ರಮಿಸೋಣ. ಸದೃಢ ಭಾರತ ಕಟ್ಟಲು ಎಲ್ಲರೂ ಪಣತೊಡಬೇಕಿದೆ ಎಂದಿದ್ದಾರೆ.
ಈ ಕುರಿತು ಎಕ್ಸ್ ಖಾತೆ ಮೂಲಕ ‘ಭಾರತ್ ಬ್ಲ್ಯೂಪ್ರಿಂಟ್’ ಹೆಸರಿನಲ್ಲಿ ಸರಣಿ ಪೋಸ್ಟ್ ಮಾಡಿ ಕರೆ ನೀಡಿದ್ದಾರೆ. ಭಾರತವು ಕಳೆದ ಒಂದು ವರ್ಷದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. 2024ರಲ್ಲಿ ಹಲವು ಬಗೆಯಲ್ಲಿ ಸುಸ್ಥಿರ ಹಾಗೂ ಗಣನೀಯ ಪ್ರಗತಿ ಸಾಧಿಸಿದೆ. ಗ್ರಾಮೀಣ ವಿದ್ಯುದೀಕರಣ, ಆರ್ಥಿಕ ವ್ಯಾಪ್ತಿಯೊಳಗೆ ಸರ್ವ ಜನರ ಸೇರ್ಪಡೆ, ಅಶಕ್ತರಿಗೆ ಸೂರು, ಮಹಿಳಾ ಸಬಲೀಕರಣ, ಡಿಜಿಟಲ್ ಕ್ರಾಂತಿ, ಲಿಂಗ ಸಮಾನತೆ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಭಾರತವು ಸಾಧನೆ ಮಾಡಿದೆ. ಈ ವರ್ಷ ಏಕತೆ ಹಾಗೂ ಸಹಿಷ್ಣುತೆ ತೋರಿಸುವ ಮೂಲಕ ಶಾಂತಿ ಸಂದೇಶ ಸಾರಿದ ವರ್ಷವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಯೋಜನೆಗಳು, ನೀತಿಗಳು ದೇಶವನ್ನು ಸುಸ್ಥಿರ ಅಭಿವೃದ್ಧಿ ಹಾದಿಯತ್ತ ಮುನ್ನಡೆಸಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವೇಳೆ ಹಲವು ಕ್ಷೇತ್ರಗಳ ಅಂಕಿ-ಅಂಶಗಳ ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮೂಲಕ 54 ಕೋಟಿ ಜನರನ್ನು ಆರ್ಥಿಕ ವ್ಯವಸ್ಥೆಯೊಳಗೆ ತರಲಾಗಿದೆ. 3.2 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಶೇ.70ರಷ್ಟು ಮಹಿಳೆಯರು ಯೋಜನೆಯ ಲಾಭ ಪಡೆದಿದ್ದಾರೆ. 6 ಲಕ್ಷ ಹಳ್ಳಿಗಳು 4ಜಿ ಸಂಪರ್ಕ ಹೊಂದಿವೆ. 2.41 ಲಕ್ಷ ಗ್ರಾಮ ಪಂಚಯಿತಿಗಳಿಗೆ ಫೈಬರ್ ನೆಟ್ ವರ್ಕ್ ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ.