ಏಷ್ಯಾದ ಅತೀ ದೊಡ್ಡ ಟೊಮೇಟೊ ಮಾರುಕಟ್ಟೆಗಳಲ್ಲಿ ಒಂದಾದ ನಮ್ಮ ರಾಜ್ಯದ ಕೋಲಾರ ಮಾರುಕಟ್ಟೆಯಲ್ಲಿ ಬೆಲೆಯ ಏರಿಳಿತ ಸಾಮಾನ್ಯವಾದರೂ, ಈ ಬಾರಿಯ ತೀವ್ರ ಬೆಲೆ ಕುಸಿತ ರೈತರನ್ನು ಹೆಚ್ಚು ಸಂಕಷ್ಟಕ್ಕೆ ತಳ್ಳಿದೆ. ಗ್ರಾಹಕರಿಗೆ ಟೊಮೇಟೊ ಕಡಿಮೆ ಬೆಲೆಗೆ ಸಿಗುತ್ತಿರುವುದು ಅನುಕೂಲವಾದರೂ ಅನ್ನದಾತರ ನಷ್ಟ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಮಹಾರಾಷ್ಟ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಿಗೆ ಕೋಲಾರದಿಂದ ಹೋಗುತ್ತಿದ್ದ ಟೊಮೇಟೊ ಪೂರೈಕೆಯ ಪ್ರಮಾಣ ತೀರಾ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಯಲ್ಲಿ ಹೆಚ್ಚುವರಿ ಸಂಗ್ರಹ ಉಂಟಾಗಿದೆ. ಸ್ಥಳೀಯ ಉತ್ಪಾದನೆ ಹೆಚ್ಚಾಗಿರುವುದು ಮತ್ತು ಬೇಡಿಕೆ ಕಡಿಮೆಯಾಗಿರುವುದು ಕೋಲಾರ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದು ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಟೊಮೇಟೊ ಬೆಳೆಯುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೊಬ್ಬರ, ಕೂಲಿ ಸೇರಿದಂತೆ ಎಕರೆಗೆ 80 ಸಾವಿರಕ್ಕೂ ಹೆಚ್ಚು ವೆಚ್ಚವಾಗಿ ದ್ದರೂ, ಮಾರುಕಟ್ಟೆಯಲ್ಲಿ ಟೊಮೇಟೊ ಧಾರಣೆ ಪಾತಾಳಕ್ಕೆ ಕುಸಿದಿದೆ. ಪ್ರತಿದಿನ ಬೆಲೆ ಕುಸಿಯುತ್ತಿರುವುದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಭಾರೀ ನಿರಾಶೆಗೊಳಗಾಗಿ ದ್ದಾರೆ. ಕೋಲಾರದಲ್ಲಿ ಕಳೆದ ತಿಂಗಳು 15 ಕೆ.ಜಿ ಬಾಕ್ಸ್‌ಗೆ ರು.300-400 ಇದ್ದ ದರವು ಇದೀಗ ಏಕಾಏಕಿ 50-130 ರು.ಗೆ ಕುಸಿತ ಕಂಡಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ 13 ಕೆ.ಜಿ ಬಾಕ್ಸ್‌ಗೆ 300-350 ಇದ್ದ ಬೆಲೆಯು ಇದೀಗ 80-120 ರು.ಗೆ ಕುಸಿತ ಕಂಡಿದೆ. ಎಲ್ಲಾ ರಾಜ್ಯಗಳಲ್ಲಿ ಹೆಚ್ಚು ಫಸಲಿನ ಆಗಮನವು ಹೊರ ರಾಜ್ಯ ಗಳಿಗೆ ಪೂರೈಕೆ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಕೋಲಾರ ಎಪಿಎಂಸಿ ಮಂಡಿ ವ್ಯಾಪಾರಿಗಳು.
ಇದನ್ನೂ ಓದಿ : ‘ವಿರೋಶ್’ ಜೋಡಿ ಆರತಕ್ಷತೆಯಲ್ಲಿ ಡಿಕೆಶಿ | ನವ ಜೋಡಿಗೆ ಶುಭ ಹಾರೈಸಿದ ಡಿಸಿಎಂ


















