ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸುಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರಿಗೆ ಈಗ ಒತ್ತಡ ಶುರುವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಕಾಂಗ್ರೆಸ್ ಒತ್ತಡ ಹಾಕಲು ಮುಂದಾಗಿದೆ. ಹೀಗಾಗಿ ರಾಜ್ಯಪಾಲರಿಗೆ ಟೆನ್ಶನ್ ಶುರುವಾಗಿದ್ದು, ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ 2014 ರ ಗಣಿ ಗುತ್ತಿಗೆ ಅಕ್ರಮ ಆರೋಪ, ಶಶಿಕಲಾ ಜೊಲ್ಲೆ ವಿರುದ್ಧದ ಮೊಟ್ಟೆ ಪ್ರಕರಣ, ಜನಾರ್ದನ್ ರೆಡ್ಡಿ ವಿರುದ್ಧದ ಅಕ್ರಮ ಸಂಪತ್ತಿನ ಪ್ರಕರಣ ಹಾಗೂ ಮುರುಗೇಶ್ ನಿರಾಣಿ ವಿರುದ್ಧದ ವಿಡಿಯೋ ಚಿತ್ರೀಕರಣ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಲಾಗಿದೆ.
ಆದರೆ, ಇಲ್ಲಿಯವರೆಗೂ ಸಂಪುಟದ ಸಲಹೆಗೆ ರಾಜಭವನದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿಜೆ ಅಬ್ರಹಾಂ ಅವರು ದೂರು ಕೊಟ್ಟ ದಿನದಂದೇ ನೋಟಿಸ್ ಜಾರಿಗೊಳಿಸಲಾಗಿತ್ತು. ಆನಂತರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಸಿಎಂ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ. ಇದೇ ತಿಂಗಳು 29ರಂದು ತನಿಖೆ ನಡೆಯಲಿದೆ.
ಹೀಗಾಗಿ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲರ ನಡೆಯನ್ನು ಖಂಡಿಸಿ ಅಹಿಂದ ಮಂಗಳವಾರ ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿತ್ತು. ಅಲ್ಲದೇ, ಆಗಸ್ಟ್ 31 ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ರಾಜಭವನ ಚಲೋ ನಡೆಸಲಿದ್ದಾರೆ. ವಿಧಾನಸೌಧದಿಂದ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಸರ್ಕಾರ ಸಲಹೆ ನೀಡಿರುವ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಲಿದ್ದಾರೆ. ಆದರೆ, ರಾಜ್ಯಪಾಲರ ನಡೆ ನಿಗೂಢವಾಗಿದೆ.
ಈ ನಾಲ್ಕು ಪ್ರಕರಣಗಳ ಬಗ್ಗೆ ಈಗಾಗಲೇ ತನಿಖೆ ಕೂಡಾ ನಡೆದಿದೆ. ಹೀಗಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಅವಕಾಶವೂ ಇದೆ ಎಂಬುವುದು ಕಾಂಗ್ರೆಸ್ ನ ವಾದವಾಗಿದೆ.