ಬೆಂಗಳೂರು : ಸಿಲಿಕಾನ್ ಸಿಟಿ ಸೇರಿದಂತೆ ಇಡೀ ರಾಜ್ಯ ಹೊಸ ವರ್ಷ ಸ್ವಾಗತಿಸಲು ಸಜ್ಜಾಗಿ ನಿಂತಿದೆ. ಹೀಗಾಗಿ ಪೊಲೀಸರು ಈಗಿನಿಂದಲೇ ಅಲರ್ಟ್ ಆಗಿದ್ದು, ಡ್ರಿಂಕ್ ಆ್ಯಂಡ್ ಡ್ರೈವ್, ರ್‍ಯಾಷ್ ಡ್ರೈವ್ ಮಾಡುವವರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಒಂದು ವಾರದಿಂದ ಮುಂಚಿತವಾಗಿಯೇ ಬೆಂಗಳೂರು ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಹೀಗಾಗಿ ಸಿಲಿಕಾನ್ ಸಿಟಿಯಲ್ಲಿನ 50 ಸಂಚಾರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ 95,179 ವಾಹನ ಚಾಲಕರನ್ನು ತಪಾಸಣೆಗೊಳಪಡಿಸಲಾಗಿದ್ದು, ಆ ಪೈಕಿ ಪಾನಮತ್ತರಾಗಿದ್ದ 1,187 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 165 ವಾಹನ ಚಾಲಕರ ವಿರುದ್ಧ ಅತಿ ವೇಗದ ಚಾಲನೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವುಗಳಿಂದ ಇಲ್ಲಿಯವರೆಗೆ 1.65 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
ವರ್ಷಾಚರಣೆಯ ಹಿನ್ನೆಲೆಯಲ್ಲಿ ಮದ್ಯಪಾನ, ಮಾದಕ ದ್ರವ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರ ಪತ್ತೆಗೆ ರಾತ್ರಿಯಿಡೀ ನಗರದ ವಿವಿಧ ಸ್ಥಳಗಳಲ್ಲಿ ಪರಿಶೀಲನೆಗೆ ಚೆಕ್ ಪಾಯಿಂಟ್ ಗಳನ್ನು ನಿರ್ಮಿಸಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವ್ಹೀಲಿಂಗ್, ಡ್ರ್ಯಾಗ್ ರೇಸ್ ನಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.