ಆಟದಲ್ಲಿ ಗೆಲ್ಲಬೇಕಾದರೆ, ನಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಪ್ರಾಮಾಣಿಕವಾಗಿ ಪಣಕ್ಕೆ ಇಡಬೇಕು. ಆದರೆ, ಇಲ್ಲೋರ್ವ ಆಟಗಾರ್ತಿ ವಿಷ ಇಟ್ಟು ಬೇರೆಯವರ ಜೀವಕ್ಕೆ ಕುತ್ತು ತಂದಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಷ್ಯಾದ ಚೆಸ್ ಆಟಗಾರ್ತಿ ಅಮೀನಾ ಅಬಕರೋವಾ ಪೊಲೀಸರ ಅತಿಥಿಯಾಗಿದ್ದಾಳೆ. ರಷ್ಯಾದ ಚೆಸ್ ಫೆಡರೇಷನ್ ಆಟಗಾರ್ತಿಯನ್ನು ಅಮಾನತುಗೊಳಿಸಿದೆ. ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 40 ವರ್ಷದ ಅಮಿನಾ ಅಬಕರೋವಾ ತನ್ನ ಎದುರಾಳಿ ಉಮೈಗಾನತ್ ಒಸ್ಮನೋವಾಗೆ ವಿಷ ನೀಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಬಕರೋವಾ ಪಂದ್ಯಕ್ಕೆ ಕೇವಲ 20 ನಿಮಿಷಗಳ ಮೊದಲು ಚೆಸ್ ಬೋರ್ಡ್ ಹತ್ತಿರ ಹೋಗಿದ್ದಾಳೆ. ನಂತರ ಚೆಸ್ ಬೋರ್ಡ್ ಮೇಲೆ ಮರ್ಕ್ಯೂರಿ ವಿಷ ಲೇಪಿಸಿದ್ದಾಳೆ. ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ಅಮಿನಾ ಅಬಕರೋವಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೊವ್ ಅವರು ಘಟನೆಯ ತನಿಖೆಗಾಗಿ ಅಬಕರೋವಾ ಅವರನ್ನು ರಷ್ಯಾದ ಚೆಸ್ ಸ್ಪರ್ಧೆಗಳಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.
ವೈಯಕ್ತಿಕ ಹಗೆತನದಿಂದಾಗಿ ವಿಷ ಹಾಕಿದ್ದೇನೆ. ಆದರೆ, ಅವಳನ್ನು ಕೊಲ್ಲುವುದು ಉದ್ಧೇಶವಾಗಿರಲಿಲ್ಲ. ಹೆದರಿಸುವುದು ಉದ್ಧೇಶವಾಗಿತ್ತು ಎಂದು ಹೇಳಿದ್ದಾರೆ.