ಬೆಳಗಾವಿ: ‘ಉತ್ತರ ಕರ್ನಾಟಕ ಭಾಗದ ಶಾಸಕರಿಗೆ, ಸಚಿವರಿಗೆ ಅಭಿವೃದ್ದಿ ಬಗ್ಗೆ ಇಚ್ಚಾಶಕ್ತಿ ಕೊರತೆ ಇದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಳಿಗಾಲದ ಅಧಿವೇಶದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಆಗುತ್ತಾ ಎನ್ನುವ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಕಳೆದ ಬಾರಿ ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳು ಮಾತನಾಡಿದ್ದರು, ಈ ಬಾರಿ ಉತ್ತರ ಕರ್ನಾಟಕಕ್ಕೆ ಮೊದಲ ಪ್ರಾತಿನಿಧ್ಯ ನೀಡಲಾಗಿದ್ದು, ಬುಧವಾರ ಅಥವಾ ಗುರುವಾರ ಇಡೀ ದಿನ ಉತ್ತರ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ವಿಚಾರವಾಗಿ ಮಾತನಾಡಿ, ಸ್ವತಂತ್ರ ರಾಜ್ಯ ಮಾಡಿಕೊಂಡು ಏನ್ ಮಾಡುತ್ತೀರಾ? ಅಭಿವೃದ್ದಿ ಆಗಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ರಾಜ್ಯ ಮಾಡುವುದಾದರೆ, ಅದು ಉಪಯೋಗವಿಲ್ಲ. ದುಡ್ಡು ಇಸ್ಕೊಂಡು ವೋಟ್ ಹಾಕಿದರೆ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಕಟುವಾಗಿ ಹೇಳಿದ್ದಾರೆ.
ಸಭಾಪತಿ ಹೊರಟ್ಟಿ ವಿರುದ್ಧವೇ ಅವಿಶ್ವಾಸ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಶಂಕರಮೂರ್ತಿ ಬಿಟ್ಟರೇ ಸಭಾಪತಿ ವಿರುದ್ಧ ಅವಿಶ್ವಾಸ ಮಾಡಿರುವ ಇತಿಹಾಸವಿಲ್ಲ. ನಾನೇನು ಹಗರಣ ಮಾಡಿಲ್ಲ, ನನ್ನ ವಿರುದ್ಧ ಅವಿಶ್ವಾಸ ಮಾಡುತ್ತಾರೆ ಎಂದು ನನಗೆ ಅನಿಸುವದಿಲ್ಲ. ಮಾಡುವುದಾದರೇ ಸದನದ ನಿರ್ಧಾರ ಅಂತಿಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪವರ್ ಶೇರಿಂಗ್ ಜಟಾಪಟಿ ಮಧ್ಯೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು-ಡಿಕೆಶಿ



















