ಬೆಂಗಳೂರು: ಉಗ್ರರ ಗುಂಡಿಗೆ ಕನ್ನಡಿಗರಿಬ್ಬರು ಬಲಿಯಾಗಿದ್ದು, ಇಬ್ಬರ ಪಾರ್ಥಿವ ಶರೀರ ರಾಜ್ಯಕ್ಕೆ ಆಗಮಿಸಿವೆ. ಈ ವೇಳೆ ಶಾಸಕ ಮುನಿರತ್ನ ಅವರು ಪಾರ್ಕ್ ಗೆ ಭರತ್ ಭೂಷಣ್ ಹೆಸರಿಡುವುದಾಗಿ ಘೋಷಿಸಿದ್ದಾರೆ.
ಭರತ್ ಭೂಷಣ್ ಅವರ ಪಾರ್ಥಿವ ಶರೀರ ವೀಕ್ಷಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ಸಂದರ್ ನಗರದಲ್ಲಿ ಒಂದು ಪಾರ್ಕ್ ಇದೆ. ಅದು ಚೆನ್ನಾಗಿ ಅಭಿವೃದ್ಧಿ ಆಗಿದೆ. ಅಲ್ಲಿನ ಅಸೋಸಿಯೇಷನ್ ಜೊತೆ ಈಗಾಗಲೇ ಮಾತನಾಡಿದ್ದೇನೆ. ಹಿಂದೂ ದರ್ಮದ ಭಾರತದ ಪ್ರಜೆ ಭರತ್ ಭೂಷಣ್. ಅವರನ್ನು ಟೆರರಿಸ್ಟ್ ಕೊಂದಿದ್ದಾರೆ. ಆ ನೋವನ್ನು ಮರೆಯಲು ಆಗುತ್ತಿಲ್ಲ. ಹೀಗಾಗಿ ಅವರ ಹೆಸರನ್ನು ಪಾರ್ಕ್ ಗೆ ಇಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಭರತ್ ಯಾವಾಗಲೂ ನನ್ನ ಜೊತೆ ಇರುತ್ತಿದ್ದರು. ಉದ್ಯಾನ ವನಕ್ಕೆ ಭರತ್ ಭೂಷಣ್ ಹೆಸರು ಇಡಲಾಗುವುದು. ಈ ಕುರಿತು ಸಿಎಂಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಪಕ್ಕದ ಕೇರಳ ರಾಜ್ಯದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಒತ್ತಡಕ್ಕೆ ಅಷ್ಟೊಂದು ದೊಡ್ಡ ಮಟ್ಟದ ಹಣ ನೀಡಲಾಗಿದೆ. ಭರತ್ ಭೂಷಣ್ ಆರ್ ಆರ್ ನಗರ ನಿವಾಸಿ. ಅವರ ಕುಟುಂಬಸ್ಥರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.