ಮಂಡ್ಯ : ಪಕ್ಷದಲ್ಲಿ ನಡೆಯುತ್ತಿರುವ ಘಟನೆಗಳು ಬೇಸರ ತರಿಸುತ್ತಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಬಣಗಳು ಮಾಡಿರುವುದು ತಪ್ಪು. ಗುಂಪುಗಾರಿಕೆಯನ್ನು ಎರಡೂ ಬಣಗಳು ಮಾಡಿವೆ. ಅದು ಒಳ್ಳೆಯದಲ್ಲ. ಇದು ಪಾರ್ಟಿಗೂ ಒಳ್ಳೆಯದಲ್ಲ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಬೆಂಬಲಿಗರಿಂದ ಬೆಂಗಳೂರಿನಲ್ಲಿ ಸಭೆ ನಡೆದ ವಿಚಾರವಾಗಿ ಮಾತನಾಡಿದ ಅವರು, ನಾನು ಈ ಪಾರ್ಟಿಗೆ ಬಂದು 50 ವರ್ಷ ಆಗಿದೆ. ನನಗೆ 18 ವರ್ಷ ಇದ್ದಾಗ ಪಾರ್ಟಿಗೆ ಬಂದಿದ್ದೇನೆ. ಎಮರ್ಜೆನ್ಸಿಯಲ್ಲಿ ಜೈಲಿನಲ್ಲಿದ್ದೆ. ನಾನು ಚಿಕ್ಕಪ್ಪ ಹಾಗೂ ನನ್ನ ಸಹೋದರ ಎಲ್ಲರೂ ಜೈಲಿನಲ್ಲಿದ್ದೇವು. ನಾವು ಹೋರಾಟ ಮಾಡಿಕೊಂಡು ಬಂದವರು. ಒಂದೇ ಬಾರಿ ಲೀಡರ್ ಆಗಿಲ್ಲ. ಹಂತ ಹಂತವಾಗಿ ಬಂದಿದ್ದೇವೆ. ಬೆಂಗಳೂರಲ್ಲಿ ಏನು ಇರಲಿಲ್ಲ. ನಾನು ಅನಂತ್ ಕುಮಾರ್ ಪಾರ್ಟಿ ಕಟ್ಟಿದ್ದೇವೆ. ಹಳೇ ಮೈಸೂರಿನಲ್ಲೂ ಹೋರಾಟ ಮಾಡಿದ್ದೇವೆ. ಇವಾಗ ನಡೆಯುತ್ತಿರುವ ಘಟನೆ ಬೇಸರ ತಂದಿದೆ ಎಂದು ಹೇಳಿದ್ದಾರೆ.
ಗುಂಪುಗಾರಿಕೆ ಎರಡೂ ಬಣ ಮಾಡಿರುವುದು ಒಳ್ಳೆಯದಲ್ಲ. ಹೀಗಾಗಿ ಎಲ್ಲರೂ ಒಂದಾಗಬೇಕು. ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದರೆ ಪಾರ್ಟಿ ಒಗ್ಗಟ್ಟಾಗಿರಬೇಕು. ನಾನು ಕೇಂದ್ರ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಪಕ್ಷದಲ್ಲಿ ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಎಲ್ಲ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮೂರು ವರ್ಷಕ್ಕೆ ಒಂದು ಬಾರಿ ಚುನಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರು ಬದಲಾಗುತ್ತಾರೆ. ರಾಜ್ಯಾಧ್ಯಕ್ಷರ ಬದಲಾವಣೆ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು, ಅಧ್ಯಕ್ಷರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದನ್ನೆಲ್ಲ ಅಮಿತ್ ಶಾ ಅವರು ತೀರ್ಮಾನಿಸುತ್ತಾರೆ. ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡುತ್ತಿದ್ದೇನೆ. ಯತ್ನಾಳ್ ಹಾಗೂ ವಿಜಯೇಂದ್ರ ಇಬ್ಬರೂ ಬಿಜೆಪಿ ನಾಯಕರು. ಆದರೆ, ಆಯ್ಕೆಯ ತೀರ್ಮಾನ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ಬಿಎಸ್ ವೈ ಬಣ ವಜಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾರೋ ಹೇಳಿದರು ಅಂತಾ ವಜಾ ಮಾಡಲು ಆಗುವುದಿಲ್ಲ. ಕೇಂದ್ರವರು ಅದನ್ನು ತೀರ್ಮಾನ ಮಾಡುತ್ತಾರೆ. ಇದಕ್ಕೆಲ್ಲ ಅಂತ್ಯ ಅವರೇ ಹಾಡುತ್ತಾರೆ ಎಂದಿದ್ದಾರೆ.
ಅಶೋಕ್ ಜ್ಯೋತಿಷಿ ಆಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಜ್ಯೋತಿಷಿ ಅಲ್ಲ. ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗುವುದು ಶತಸಿದ್ಧ. ಡಿಕೆ ಶಿವಕುಮಾರ್, ಪರಮೇಶ್ವರ್ ಜ್ಯೋತಿಷ್ಯ ಕೇಳುತ್ತಾರೆ. ಆದರೆ, ನಾನು ಕೇಳುವುದಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ನಾನು ವಿಪಕ್ಷ ನಾಯಕ ನನಗೂ ಮಾಹಿತಿ ಬರುತ್ತದೆ. ನಮಗು ಎಲ್ಲಾ ಲಿಂಕ್ ಇವೆ. ಆದರೆ, ನಾನು ಹೇಳಿದ್ದು ಮಾತ್ರ ಸತ್ಯವಾಗುತ್ತದೆ ಎಂದಿದ್ದಾರೆ.


















