ಕಲಬುರಗಿ: ಒಣಗಿ ಹೋಗಿದ್ದ ತೊಗರಿ ಬೆಳೆಯನ್ನು ತೋರಿಸಲು ತಂದಿದ್ದ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ತೊಗರಿ ಬೆಳೆ ಹಾನಿಯಾಗಿದ್ದನ್ನು ನನಗೆ ತೋರಿಸಲು ಬಂದಿರುವೆಯಾ? 6 ಹಡೆದವಳ ಮುಂದೆ ಮೂರು ಹಡೆದವಳು ಬುದ್ಧಿ ಹೇಳಿದಂತೆ. ನಿನ್ನ ತೊಗರಿ ಎಷ್ಟು ಹಾಳಾಗಿದೆ? ಎಂದು ಖರ್ಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಆ ಯುವಕ ನಾಲ್ಕು ಎಕರೆ ಹಾಳಾಗಿದೆ ಎಂದು ಹೇಳಿದ್ದಾರೆ. ನಿನ್ನದು ನಾಲ್ಕು ಎಕರೆ ಹಾಳಾಗಿರಬಹುದು. ನನ್ನದು ನಲವತ್ತು ಎಕರೆ ಹಾಳಾಗಿದೆ. ಬರೀ ತೊಗರಿ ಮಾತ್ರವಲ್ಲ. ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಸಹ ಹಾಳಾಗಿವೆ.
ಬರೀ ಪ್ರಚಾರಕ್ಕಾಗಿ ಈ ರೀತಿ ಬರಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ದೇಶದ ಅತಿವೃಷ್ಟಿಯಿಂದ ಹಾಳಾಗಿರುವ ಬಗ್ಗೆ ಗಂಭೀರವಾಗಿಲ್ಲ. ಇದನ್ನು ಮೋದಿ ಹಾಗೂ ಅಮಿತ್ ಶಾಗೆ ತೋರಿಸು ಎಂದು ಕಿಡಿಕಾರಿದ್ದಾರೆ.