ಭುವನೇಶ್ವರ್: ನಾಯಕರಿಗೆ ಸೆಕ್ಯೂರಿಟಿ ಬೇಕು. ಅದರಲ್ಲಿಯೂ ಪ್ರಧಾನಿ ಅವರಿಗೆ ಹೈ ಸೆಕ್ಯೂರಿಟಿ ಇರಲೇಬೇಕು. ಸ್ವಲ್ಪ ಯಾಮಾರಿದರೂ ಯಾವ ಅನಾಹುತ ಸಂಭವಿಸುತ್ತದೆಯೋ ತಿಳಿಯದು. ಹೀಗಾಗಿ ಹೆಚ್ಚಿನ ಸೆಕ್ಯೂರಿಟಿ ಕಲ್ಪಿಸಿರುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸೆಕ್ಯೂರಿಟಿ ಮೇಲುಸ್ತುವಾರಿ ಜವಾಬ್ದಾರಿಯನ್ನು ನೀಡಿರುವ ಘಟನೆ ನಡೆದಿದೆ. ಇದನ್ನು ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆ. 17ರಂದು ಮಹಿಳಾ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ನಿಟ್ಟಿನಲ್ಲಿ ಒಡಿಶಾಗೆ ಭೇಟಿ ನೀಡುತ್ತಿದ್ದಾರೆ. ಜನತಾ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಹೈ ಸೆಕ್ಯೂರಿಟಿ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಈ ಪೈಕಿ ಜನಸಂದಣಿ ನಿರ್ವಹಿಸಲು ಒಡಿಶಾ ಅಡ್ಮಿನಿಸ್ಟ್ರೇಟ್ ಸರ್ವೀಸ್ ಅಧಿಕಾರಿ ಪ್ರಭೋಧ ಕುಮಾರ್ ಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಪ್ರಭೋಧ ಕುಮಾರ್ ಸಾವನ್ನಪ್ಪಿ ಒಂದು ವರ್ಷವಾಗಿದೆ.
ಮೋದಿ ಭೇಟಿ ಬೇಳೆ ಭದ್ರತಾ ವ್ಯವಸ್ಥೆ, ಜನಸಂದಣಿ ನಿರ್ವಹಣೆ, ಟ್ರಾಫಿಕ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲು 50 OAS ಅಧಿಕಾರಿಗಳ ಹೆಸರು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಪ್ರಬೋಧ ಕುಮಾರ್ ಹೆಸರು ಕೂಡ ಇದೆ. ಆದರೆ, ಈ ಅಧಿಕಾರಿ 2023ರ ಜುಲೈ ತಿಂಗಳಲ್ಲೇ ನಿಧನರಾಗಿದ್ದಾರೆ. ಜನಸಂದಣಿ ನಿರ್ವಹಿಸುವಲ್ಲಿ ಪ್ರಭೋಧ ಕುಮಾರ್ ಉತ್ತಮ ಹೆಸರು ಮಾಡಿದ್ದರು.
ಹೀಗಾಗಿ ಸೆಪ್ಟೆಂಬರ್ 17ರ ಕಾರ್ಯಕ್ರಮಕ್ಕೆ ಸಾವನ್ನಪ್ಪಿರುವ ಪ್ರಬೋಧ್ ಕುಮಾರ್‌ಗೆ ಡ್ಯೂಟಿ ಹಾಕಿದ್ದಾರೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಒಡಿಶಾ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ಈ ವಿಷಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗುತ್ತಿದ್ದಂತೆ ಸರ್ಕಾರ ಆದೇಶ ಹಿಂಪಡೆದು, ಮತ್ತೊಂದು ಆದೇಶ ಪ್ರಕಟಿಸಿದೆ. ಒಡಿಶಾದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಬಿಜೆಡಿಯು ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯನ್ನು ಟ್ರೋಲ್ ಮಾಡುತ್ತಿದೆ.