ಬೆಂಗಳೂರು: ತಮ್ಮ ಆಸ್ಪತ್ರೆಯಲ್ಲೇ ಔಷಧಿಗಳನ್ನು ಖರೀದಿಸಬೇಕೆಂದು ಡಿಸಿಪಿಯೊಬ್ಬರಿಗೆ ಫೋರ್ಟಿಸ್ ಆಸ್ಪತ್ರೆ ಮೆಡಿಕಲ್ ಸಿಬ್ಬಂದಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.
ವಿವಿಐಪಿ ಡಿಸಿಪಿ ಮಂಜುನಾಥ್ ಎಂಬುವವರಿಗೆ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ಈ ಕುರಿತು ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಮೆಡಿಕಲ್ ಸ್ಟೋರ್ ವಿರುದ್ಧ ಈ ಆರೋಪ ಕೇಳಿ ಬಂದಿದೆ.
ಮಂಜುನಾಥ್ ಅವರು ಆಸ್ಪತ್ರೆ ಒಳರೋಗಿಯಾಗಿ ಸೆಪ್ಟೆಂಬರ್ 6ರಂದು ದಾಖಲಾಗಿದ್ದರು. ಆನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರಿಗೆ ವೈದ್ಯರು ಮಾತ್ರೆ ಬರೆದು ಕೊಟ್ಟಿದ್ದಾರೆ. ಈ ಮಾತ್ರೆಯ ಬಗ್ಗೆ ಡಿಸಿಪಿ, ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿ ವಿಚಾರಿಸಿದ್ದಾರೆ. ಅಲ್ಲಿದ್ದ ಸಿಬ್ಬಂದಿ 1 ಟ್ಯಾಬ್ಲೆಟ್ ಬೆಲೆ 350 ರೂ. ಒಂದು ಶೀಟ್ ನಲ್ಲಿ 25 ಟ್ಯಾಬ್ಲೆಟ್ ಇರುತ್ತವೆ. ಎಲ್ಲ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ದರ ಹೆಚ್ಚಾಗುತ್ತಿದ್ದಂತೆ ಡಿಸಿಪಿ ಮಾತ್ರೆ ತಿರಸ್ಕರಿಸಿದ್ದಾರೆ. ಆದರೆ, ಅಷ್ಟಕ್ಕೆ ಸುಮ್ಮನಾಗದ ಸಿಬ್ಬಂದಿ, ನಮ್ಮ ವೈದ್ಯರು ಬರೆದ ಮಾತ್ರೆಯನ್ನು ಇಲ್ಲೇ ತೆಗೆದುಕೊಳ್ಳಬೇಕು. ಅವರು ಬರೆಯುವ ಮಾತ್ರ ಬೇರೆ ಎಲ್ಲೂ ಸಿಗುವುದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಇದಕ್ಕೆ ಗಾಬರಿಗೊಂಡ ಡಿಸಿಪಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.