ಶಿವಮೊಗ್ಗ: ಕೇವಲ 15 ಸಾವಿರಕ್ಕೆ ವೃದ್ಧೆಯ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ತೀರ್ಥಹಳ್ಳಿ(Thirthahalli) ತಾಲೂಕಿನ ಮಂಜರಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂಟಿ ವೃದ್ಧೆಯ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಶನಿವಾರ ಬೆಳಗ್ಗೆ ವೃದ್ಧಿಯ ಕೊಲೆ ಮಾಡಿದ್ದಾರೆ. ಸಾವಿತ್ರಮ್ಮ (60) ಸಾವನ್ನಪ್ಪಿದ ದುರ್ದೈವಿ. ಸಾವನ್ನಪ್ಪಿದ ವೃದ್ಧೆಯು ಬ್ಯಾಂಕ್ ಗೆ ಹೋಗಿ ಹಣ ತೆಗೆದುಕೊಂಡು ಬಂದಿರುವುದನ್ನು ದುಷ್ಕರ್ಮಿಗಳು ನೋಡಿದ್ದಾರೆ. ಒಬ್ಬಳೇ ಇರುವುದನ್ನು ಅರಿತಿದ್ದ ಖದೀಮರು ಮನೆಗೆ ನುಗ್ಗಿ ಅಜ್ಜಿ ಬಳಿ ಇದ್ದ ನಗದು ಕಿತ್ತುಕೊಂಡಿದ್ದಾರೆ. ಅಜ್ಜಿ ದರೋಡೆಗೆ ವಿರೋಧ ವ್ಯಕ್ತಪಡಿಸಿದ್ದಾಗ ದೊಣ್ಣೆಯಿಂದ ದಾಳಿ ನಡೆಸಿ, ಹತ್ಯೆ ಮಾಡಿ ನಂತರ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಕ್ಕ-ಪಕ್ಕದ ಗ್ರಾಮಸ್ಥರು ಸಂಜೆ ನೋಡಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕುಂಸಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾನೆ. ಮೃತ ಅಜ್ಜಿ, ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಇತ್ತೀಚೆಗಷ್ಟೇ ಅಜ್ಜಿಯ ಮನೆಯಿಂದ 50 ಸಾವಿರ ರೂ. ಕಳ್ಳತನವಾಗಿತ್ತು ಎನ್ನಲಾಗಿದೆ. ಅದೇ ಕಳ್ಳರು ಈ ಕೃತ್ಯ ಎಸಗಿರಬುಹುದು ಎಂದು ಶಂಕಿಸಲಾಗಿದೆ. ಈ ಪ್ರಕರಣದಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.