ಕಾರವಾರ: ಪಿಗ್ಮಿ ಹಣಕ್ಕಾಗಿ ವೃದ್ಧೆಯ ಹತ್ಯೆ ನಡೆದಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ಬಸವನಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಸಿದ್ದಾಪುರ ನಗರದ ಬಸವನಗಲ್ಲಿ ನಿವಾಸಿ ಗೀತಾ ಹೂಂಡೆಕರ್ (75) ಕೊಲೆಯಾಗಿರುವ ದುರ್ದೈವಿ. ಸಹಕಾರಿ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹೂಂಡೆಕರ್ ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ರೂಪಾಯಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರು. ಗೀತಾ ಅವರಿಗೆ ಇಬ್ಬರು ಹೆಣ್ಮಕ್ಕಳಿದ್ದು, ಇಬ್ಬರ ಮದುವೆ ಮಾಡಿದ್ದರು.
ಪತಿ ಸಾವನಪ್ಪಿರುವ ಹಿನ್ನೆಲೆ ಕೆಲವು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಪಿಗ್ಮಿ ಸಂಹ್ರಹಿಸಿ ಮನೆಯ ಒಳಗೆ ಹೋಗಿದ್ದವರು ಮರಳಿ ಬಂದಿರಲಿಲ್ಲ. ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದು ಅವರ ಮಗಳಿಗೆ ತಿಳಿಸಿದ್ದಾರೆ. ನಂತರ ಮಗಳು ಮತ್ತು ಅಳಿಯ ಮನೆಗೆ ಆಗಮಿಸಿ ಮನೆಬಾಗಿಲು ಒಡೆದು ನೋಡಿದಾಗ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ರಾತ್ರಿ ಹೊತ್ತು ಬಾತ್‌ರೂಂ ಮೇಲ್ಚಾವಣಿಯಿಂದ ಮನೆಗೆ ನುಗ್ಗಿ ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿ, ಪಿಗ್ಮಿ ಹಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.