ಚಿತ್ರದುರ್ಗ: 20 ವರ್ಷದ ಯುವತಿಯ ಮದುವೆಯಾಗಿದ್ದ 40 ವರ್ಷದ ವ್ಯಕ್ತಿಯ ಕೊಲೆ ನಡೆದಿರುವ ಘಟನೆ ನಡೆದಿದೆ.
ಚಿತ್ರದುರ್ಗ (Chitradurga) ತಾಲ್ಲೂಕಿನ ಕೋಣನೂರು ಗ್ರಾಮದ ಮಂಜುನಾಥ (40) ಕೊಲೆಯಾದ ವ್ಯಕ್ತಿ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಕಾವ್ಯ, ದಿವ್ಯ, ಶಂಕರಮ್ಮ, ಬಸವರಾಜ, ಪ್ರಸನ್ನ, ಹರ್ಷ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ 20 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಈ ಘಟನೆಯಲ್ಲಿ ಮಂಜುನಾಥ್ ಪೋಷಕರು ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನು ಕಳೆದ ಐದು ವರ್ಷಗಳ ಹಿಂದೆ ಮಡಿವಾಳ ಜನಾಂಗದ ಶಿಲ್ಪ ಎಂಬ ಯುವತಿಯನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ. ಅಲ್ಲದೇ, ಆಕೆಗೆ ವಂಚಿಸಿದ್ದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಗ ಜೈಲು ವಾಸ ಅನುಭವಿಸಿ ಬಂದಿದ್ದ.
ಆದರೆ, ಇತ್ತೀಚೆಗೆ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಇಬ್ಬರ ಮಧ್ಯೆ ವಯಸ್ಸಿನ ಅಂತರ ಹೆಚ್ಚಾಗಿತ್ತು. ಇದಕ್ಕೆ ಯುವತಿಯ ಕುಟುಂಬಸ್ಥರ ಒಪ್ಪಿಗೆ ಇರಲಿಲ್ಲ. ಹೀಗಾಗಿ ಕುಟುಂಬಸ್ಥರೆಲ್ಲ ಸೇರಿ ಮದುವೆ ಮಾಡಿಸುತ್ತೇವೆಂದು ಕರೆಯಿಸಿದ್ದರು. ಊರಿಗೆ ಬರುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿ ಮಂಜುನಾಥನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನಸೂಯ ಮೇಲೆ ಕೂಡ ಹಲ್ಲೆಯಾಗಿದೆ ಎನ್ನಲಾಗಿದೆ.