ಪೂರ್ಣಚಂದ್ರ ತೇಜಸ್ವಿಯವರ “ಡೇರ್ ಡೆವಿಲ್ ಮುಸ್ತಾಫ” ಕೃತಿ ಆಧಾರಿತ ಸಿನಿಮಾ ಬಂದು ಸಖತ್ ಸದ್ದು ಮಾಡಿತ್ತು. ಇದೀಗ ಅವರ ಮತ್ತೊಂದು ಕೃತಿ ಸಿನಿಮಾ ರೂಪ ತಳೆಯುವ ತವಕದಲ್ಲಿದೆ.
ಹೌದು, ನಿರ್ದೇಶಕ ಗುರುದತ್ ಗಾಣಿಗ ತೇಜಸ್ವಿಯವರ ಖ್ಯಾತ ಕೃತಿ “ಜುಗಾರಿ ಕ್ರಾಸ್” ಕಥೆ ಆಧರಿಸಿ ಸಿನಿಮಾ ಕಟ್ಟಿಕೊಡುವ ತಯಾರಿಯಲ್ಲಿದ್ದಾರೆ. ಇಂದು ಅಧಿಕೃತವಾಗಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸುವ ಮೂಲಕ ತಾನು ಜುಗಾರಿ ಕ್ರಾಸ್ ಚಿತ್ರ ಮಾಡುತ್ತಿರುವ ಬಗ್ಗೆ ಸುದ್ದಿ ಹಂಚಿಕೊಂಡಿದ್ದಾರೆ.

ಡೈನಾಮಿಕ್ ಪ್ರಿನ್ಸ್ ‘ಪ್ರಜ್ವಲ್ ದೇವರಾಜ್’ ಅಭಿನಯದಲ್ಲಿ ಮೂಡಿ ಬರುತ್ತಿರುವ “ಕರಾವಳಿ” ಎಂಬ ನಾಡ ಸೊಗಡಿನ ಚಿತ್ರ ತಯಾರಿಸುತ್ತಾ ಸದ್ದು ಮಾಡುತ್ತಿದ್ದ ಗುರುದತ್, ಜುಗಾರಿ ಕ್ರಾಸ್ ಅನಾವರಣದ ಮೂಲಕ ಮತ್ತೊಂದು ಚಿತ್ರ ಕಟ್ಟಲು ತಯಾರಾಗಿದ್ದಾರೆ. ಸದ್ಯ ಶೀರ್ಷಿಕೆ ಮಾತ್ರವೇ ಕಾಣಿಸಿದ್ದು ತಾರಾ ಬಳಗ ಮತ್ತು ತಂತ್ರಜ್ಞರ ಬಗೆಗೆ ಇನ್ನಷ್ಟೇ ತಿಳಿಸಬೇಕಿದೆ.
ಒಟ್ಟಿನಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಎಂದರೇನೇ ಅಲ್ಲೊಂದು ವಿಸ್ಮಯವಂತೂ ಇದ್ದೇ ಇದೆ. ಹಾಗೆ ನೋಡಿದರೇ, ಅದಾಗಲೇ ಜುಗಾರಿ ಕ್ರಾಸ್ ಒಂದು ಕಾದಂಬರಿಯಾಗಿ ಓದುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೀಗ ಒಂದು ಚಿತ್ರವಾಗಿ ನೋಡುಗರನ್ನು ಹೇಗೆಲ್ಲಾ ರಂಜಿಸಲಿದೆ ಕಾದುನೋಡಬೇಕಿದೆ.