ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಮಂಗನ ಬಾವು ಕಾಯಿಲೆಯ ಕಾಟ ಶುರುವಾಗಿದೆ. ಇದರಿಂದಾಗಿ ಜನರು ಚಿಂತಾಕ್ರಾಂತರಾಗಿದ್ದಾರೆ.
ಮುಂಡಗೋಡದ ಬೃಂದಾವನ ವಸತಿ ಬಡಾವಣೆಯಲ್ಲಿ ಮಂಗನ ಬಾವು ಕಾಯಿಲೆಯಿಂದ ಹಲವು ವಿದ್ಯಾರ್ಥಿಗಳು ಮಂಗನ ಬಾವು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಇಲ್ಲಿನ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶೀತ, ಜ್ವರ, ಕೆಮ್ಮು ಹಾಗೂ ಮುಖದ ಬಾವು ಕಾಣಿಸಿಕೊಂಡಿದೆ. ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಕೇವಲ ಎರಡು ದಿನಗಳಲ್ಲೇ ಸೋಂಕಿತರ ಸಂಖ್ಯೆ 25ಕ್ಕೆ ಏರಿದೆ.
ಮಂಗನಬಾವು ರೋಗವು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಈ ರೋಗ ಹರಡದಂತೆ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.