ಬೆಂಗಳೂರು: ಗ್ಯಾಂಗ್ ವೊಂದು ಏಕಾಏಕಿ ಮನೆಯನ್ನೇ ಧ್ವಂಸ ಮಾಡಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
45 ವರ್ಷಗಳಿಂದ ಮಲ್ಲೇಶ್ವರಂ 18 ನೇ ಕ್ರಾಸ್ನಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ಜಯಲಕ್ಷ್ಮಿ ಎಂಬುವವರು ವಾಸಿಸುತ್ತಿದ್ದರು. ಆದರೆ, ಸೋಮವಾರ ನಾಲ್ಕು ಗಂಟೆಗೆ ಜಯಲಕ್ಷ್ಮಿ ಮನೆಗೆ ನುಗ್ಗಿದ್ದ 40 ರಿಂದ 45 ಜನರ ರೌಡಿಗಳ ಗ್ಯಾಂಗ್ ಇಡೀ ಮನೆಯನ್ನು ಧ್ವಂಸ ಮಾಡಿದೆ. ಮಹಿಳೆ, ಮಕ್ಕಳು ಅಂತಲೂ ನೋಡದೇ ಎಲ್ಲರನ್ನ ಮನೆಯಿಂದ ಎಳೆದು ಹೊರ ಹಾಕಿ ಮನೆಯನ್ನೇ ಪೀಸ್ ಪೀಸ್ ಮಾಡಿದ್ದಾರೆಂದು ಜಯಲಕ್ಷ್ಮಿ ಅವರು ಆರೋಪಿಸಿದ್ದಾರೆ.
ಅಸಲಿಗೆ ಈ ಜಯಲಕ್ಷ್ಮಿಯ ಗಂಡ, ಗಣೇಶ್ ಮಹಲ್ ಅವರು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಗಣೇಶ್ ಮಹಲ್ ಮಾಲೀಕ ಜಯಲಕ್ಷ್ಮಿ ಅವರಿಗೆ ಈ ಜಾಗ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಜಯಲಕ್ಷ್ಮಿ ಮತ್ತು ಅವರ ಪತಿ ಮನೆ ಕಟ್ಟಿಸಿಕೊಂಡಿದ್ದರು. ಆದರೆ, ಕಳೆದ ಕೆಲವು ವರ್ಷಗಳ ಹಿಂದೆ ಜಾಗ ಕೊಟ್ಟಿದ್ದ ಹೋಟೆಲ್ ಮಾಲೀಕ ಸಾವನ್ನಪ್ಪಿದ್ದರು. ಅಲ್ಲದೇ, ಜಯಲಕ್ಷ್ಮಿ ಗಂಡ ಕೂಡ ಸಾವನ್ನಪ್ಪಿದ್ದರು. ಈ ವಿಚಾರ ತಿಳಿದ ಜೈ ಕಿಶನ್, ಪ್ರತಾಪ್, ಚಿನ್ನಬಾಬು ಎಂಬ ರೌಡಿಗಳು ಜಾಗದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. 25 ಲಕ್ಷ ರೂ. ಕೊಡ್ತೀವಿ ಜಾಗ ಬಿಟ್ಟುಕೊಡಿ ಅಂತ ರೌಡಿಗಳು ಹೇಳಿದ್ದರು. ಆದರೆ, ಇದಕ್ಕೆ ಜಯಲಕ್ಷ್ಮೀ ಒಪ್ಪಿರಲಿಲ್ಲ. ಬೆದರಿಕೆ ಕೂಡ ಹಾಕಿದ್ದರು ಎಂದು ಈಗ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮನೆ ಧ್ವಂಸ ಮಾಡಿದ್ದು ಮಾತ್ರವಲ್ಲ, ರೌಡಿ ಗ್ಯಾಂಗ್ ಮನೆಯಲ್ಲಿದ್ದ ಚಿನ್ನದ ಸರ, ಓಲೆ, ಉಂಗುರ ದೋಚಿಕೊಂಡು ಹೋಗಿದ್ದಾರೆಂದು ಮಹಿಳೆ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.