ದಾವಣಗೆರೆ : ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಾಜ್ಯ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕುಟುಂಬ ಸದಸ್ಯರಿಗೆ ಸೇರಿದ ಎಂ/ಎಸ್ ಜಿಎಂಎಂ ಎಂಟರ್‌ಪ್ರೈಸಸ್ ಸೇರಿ 26 ಕ್ವಾರಿ ಗುತ್ತಿಗೆದಾರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಂಡ ವಿಧಿಸಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಕುಟುಂಬ ಸದಸ್ಯರಿಗೆ ಸೇರಿದ ಮೂರು ಗುತ್ತಿಗೆಗಳು ಇದರಲ್ಲಿ ಸೇರಿವೆ. ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಾವಣಗೆರೆ ಜಿಲ್ಲೆಯಲ್ಲಿ ನಡೆಸಿದ ತಪಾಸಣೆಯ ನಂತರ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು, ಅದಾದ ಬಳಿಕ ಇಲಾಖೆ ತಲಾ 25,000 ರೂ.ಗಳ ದಂಡ ವಿಧಿಸಿದೆ.
ಮಲ್ಲಿಕಾರ್ಜುನ ಸಹೋದರ ಎಸ್.ಎಸ್. ಗಣೇಶ್, ದಾವಣಗೆರೆಯ ಹೆಬ್ಬಾಳ ಗ್ರಾಮದಲ್ಲಿ ಮೂರು ಸರ್ವೇ ಸಂಖ್ಯೆಗಳಲ್ಲಿ (144, 145 ಮತ್ತು 148) ಕ್ವಾರಿಗಳನ್ನು ನಿರ್ವಹಿಸುತ್ತಿರುವ ಜಿಎಂಎಂ ಎಂಟರ್‌ಪ್ರೈಸಸ್‌ನ ಪಾಲುದಾರರಾಗಿದ್ದಾರೆ. ಈ ಮೂರು ಸ್ಥಳಗಳಲ್ಲಿ, ಪರಿಸರ ಅನುಮತಿ ಸೇರಿದಂತೆ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಲಾಗಿದೆ.
ಗುತ್ತಿಗೆ ಪ್ರದೇಶದ ವ್ಯಾಪ್ತಿಯಿಂದ 7.5 ಮೀಟರ್ ಬಫರ್ ವಲಯವನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ, ಈ ಪ್ರದೇಶಕ್ಕೆ ಬೇಲಿ ಹಾಕುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜಿಎಂಎಂ ಎಂಟರ್‌ಪ್ರೈಸಸ್‌ಗೆ ಒಟ್ಟಾರೆಯಾಗಿ 75,000 ರೂ. ದಂಡ ವಿಧಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಇತರ 23 ಗುತ್ತಿಗೆದಾರರು ಕೂಡ ಇದೇ ರೀತಿಯಾಗಿ ನಿಯಮ ಉಲ್ಲಂಘನೆ ಮಾಡಿದ್ದರಿಂದ ಅವರಿಗೂ ಸಹ ತಲಾ 25 ಸಾವಿರ ವಿಧಿಸಲಾಗಿದೆ.


















