ಬಾಗಲಕೋಟೆ: ಕೊನೆಗೂ ಸಿಎಂ ಸಿದ್ದರಾಮಯ್ಯ ಸಂಧಾನದಿಂದಾಗಿ ಮೇಟಿ ಕುಟುಂಬದಲ್ಲಿ ಶಾಂತಿ ನೆಲೆಸಿದ್ದು, ಉಮೇಶ್ ಮೇಟಿಗೆ ಟಿಕೆಟ್ ಧಕ್ಕಿದೆ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಗಾಗಿ ಅವರ ನಾಲ್ವರು ಮಕ್ಕಳ ಮಧ್ಯೆಯೇ ಗುದ್ದಾಟ ಶುರುವಾಗಿತ್ತು. ಮಹಾದೇವಿ ಮೇಟಿ ಯಾರಿಗೆ ಟಿಕೆಟ್ ಕೊಟ್ಟರೂ ನನ್ನ ಬಂಡಾಯ ಇದ್ದೇ ಇರುತ್ತದೆ ಅಂತಾ ಹೇಳಿದ್ದರು. ಈಗ ತಮ್ಮ ಮಾತು ಹಾಗೂ ಬೇಸರವನ್ನು ಮರೆತು ಒಂದಾಗುವುದಾಗಿ ಹೇಳಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಿಂದ ಉಮೇಶ್ ಮೇಟಿಗೆ ಟಿಕೆಟ್ ಸಿಕ್ಕಿದೆ. ಮಕ್ಕಳ ಮಧ್ಯೆ ಟಿಕೆಟ್ ಫೈಟ್ ಜೋರಾಗುತ್ತಿದ್ದಂತೆ ಸ್ವತಃ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿ ಶಮನ ಶಾಂತಗೊಳಿಸಿದ್ದರು. ಸದ್ಯ ಸಿಎಂ ಸಂಧಾನ ಸಭೆ ಮಾಡಿದ ಬಳಿಕ ಮಹಾದೇವಿ ಮೇಟಿ ಕೂಲ್ ಆಗಿದ್ದು, ಉಮೇಶ್ ಗೆ ಟಿಕೆಟ್ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕುಟುಂಬದ ಅಭ್ಯರ್ಥಿಯನ್ನು ನಾವೆಲ್ಲ ಒಗ್ಗಟ್ಟಿನಿಂದ ದುಡಿದು ಗೆಲ್ಲಿಸುತ್ತೇವೆ. ಸಹೋದರ ಉಮೇಶ್ ಗೆ ಟಿಕೆಟ್ ನೀಡಿದ್ದು ಖುಷಿ ತಂದಿದೆ. ನಾನು ಅಂದುಕೊಂಡಂತೆಯೇ ಹೈಕಮಾಂಡ್ ನಿರ್ಧಾರ ಮಾಡಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ. ಸಹೋದರನ ಗೆಲುವಿಗೆ ನಾಲ್ವರೂ ನಿಂತು ಪ್ರಯತ್ನ ಮಾಡುತ್ತೇವೆ. ನಾಳೆ ನಾಮಪತ್ರ ಸಲ್ಲಿಸಲು ನಾನೂ ಹೋಗುತ್ತೇನೆ. ಪ್ರಚಾರದಲ್ಲಿಯೂ ನಾಲ್ವರೂ ಭಾಗವಹಿಸುತ್ತೇವೆ ಎಂದಿದ್ದಾರೆ.



















