ನೆಲಮಂಗಲ : ಇತ್ತೀಚೆಗೆ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ.
ಕಾನೂನು ಎಷ್ಟೇ ಕಠಿಣವಾಗಿದ್ದರೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಾತ್ರ ಅತಿಯಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೇ ವಾಕಿಂಗ್ ಗೆ ಹೋಗಿದ್ದ ಮಹಿಳೆಯನ್ನು ಕಾಮುಕನೊಬ್ಬ ತಬ್ಬಿಕೊಂಡು ಕಿರುಕುಳ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕಾಮುಕನೊಬ್ಬ ಜಿ.ಎನ್.ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯ (Nursing College Student) ಎದೆಯ ಭಾಗ ಮುಟ್ಟಿ ಪರಾರಿಯಾಗಿದ್ದ. ಸದ್ಯ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಜೇವರ್ಗಿ ಮೂಲದ ಬಸವರಾಜು (28) ಬಂಧಿತ ಆರೋಪಿ ಎನ್ನಲಾಗಿದೆ.
21 ವರ್ಷದ ಯುವತಿ ನರ್ಸಿಂಗ್ ಓದಲು ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದಿದ್ದರು. 8ನೇ ಮೈಲಿಯ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬಸವರಾಜ್ ಚಿಕ್ಕಬಾಣಾವಾರದ ಮಾರುತಿ ನಗರದಲ್ಲಿ ವಾಸಿಸುತ್ತಿದ್ದ. ಜುಲೈ 30 ರಂದು ವಿದ್ಯಾರ್ಥಿನಿ ರಾತ್ರಿ 9 ಗಂಟೆ ವೇಳೆಗೆ ಸಪ್ತಗಿರಿ ಕಾಲೇಜು ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ಆರೋಪಿಯು ವಿದ್ಯಾರ್ಥಿನಿಯ ಎದೆ ಭಾಗವನ್ನು ಮುಟ್ಟಿದ್ದಾನೆ. ವಿದ್ಯಾರ್ಥಿನಿ ಜೋರಾಗಿ ಚೀರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಆನಂತರ ವಿದ್ಯಾರ್ಥಿನಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಇತ್ತೀಚೆಗೆ ಕೂಡ ಇಂತಹ ಪ್ರಕರಣಗಳು ವರದಿಯಾಗಿದ್ದವು. ಸದ್ಯ ಅವುಗಳ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳ ಸುದ್ದಿ ಕೇಳಿ ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.