ಕೊಪ್ಪಳ: ಜನಸ್ಪಂದನ (janaspandana) ಕಾರ್ಯಕ್ರಮದ ಸಂದರ್ಭದಲ್ಲಿ ಯುವ ರೈತರೊಬ್ಬರು ಮದುವೆಗೆ ವಧು ಹುಡುಕಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಪ್ರಸಂಗ ನಡೆದಿದೆ.
ಅರ್ಜಿದಾರನ ಸಮಸ್ಯೆಯನ್ನು ಕೇಳಿ ಸ್ವತ ಜಿಲ್ಲಾಧಿಕಾರಿಯೇ ಶಾಕ್ ಆಗಿದ್ದಾರೆ. ಕನಕಗಿರಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ನೂರಾರು ಜನರು ತಮ್ಮ ಕಷ್ಟಗಳ ಕುರಿತು ಮನವಿ ಮಾಡುತ್ತಿದ್ದರು. ಈ ವೇಳೆ ದಯವಿಟ್ಟು ರೈತರ ಮಕ್ಕಳಿಗೆ ಕನ್ಯಾ ಹುಡುಕಿ ಕೊಡಿ ಅಂತ ಮನವಿ ಮಾಡಿದ್ದಾರೆ.
ಕನಕಗಿರಿ ಪಟ್ಟಣದ ನಿವಾಸಿಯಾಗಿರುವ ಮೂವತ್ತೈದು ವರ್ಷದ ಸಂಗಪ್ಪ, ಜಿಲ್ಲಾಧಿಕಾರಿಗಳ ಮುಂದೆ ಇಂತಹ ಬೇಡಿಕೆ ಇಟ್ಟ ವ್ಯಕ್ತಿ. ತಾನು ರೈತನಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಮದುವೆಯಾಗಲು ಕನ್ಯಾ ಹುಡುಕುತ್ತಿದ್ದೇನೆ. ಆದರೆ ನನಗೆ ಯಾರು ಕೂಡ ಕನ್ಯಾ ಕೊಡ್ತಿಲ್ಲಾ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಅನೇಕ ರೈತರ ಮಕ್ಕಳಿಗೆ ಯಾರು ಕೂಡ ವಧು ನೀಡುತ್ತಿಲ್ಲ. ದಯವಿಟ್ಟು ಯಾವುದಾದರೂ ಒಳ್ಳೆಯ ಯೋಜನೆ ರೂಪಿಸಿ ಕನ್ಯಾ ಸಿಗುವಂತೆ ಮಾಡಿ ಎಂದು ಅರ್ಜಿ ನೀಡಿದ್ದಾನೆ. ಸಂಗಪ್ಪನ ನೋವನ್ನು ಆಲಿಸಿದ ಜಿಲ್ಲಾಧಿಕಾರಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.