ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕಳೆದ 10 ದಿನಗಳಿಂದಲೂ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಕಾಮುಕನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಎಸ್.ಜಿ. ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಆರೋಪಿ. ಆರೋಪಿಯನ್ನು ಕೇರಳದಲ್ಲಿ ಪೊಲೀಸರು ಬಂಧಿಸಿ ಕರೆ ತರುತ್ತಿದ್ದಾರೆ. ಆರೋಪಿ ಪತ್ತೆಗಾಗಿ 700ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು.
ಆರೋಪಿಯ ಗುರುತು ಹಾಗೂ ಮುಖಚಹರೆ ಪತ್ತೆ ಹಚ್ಚಿ ಪೊಲೀಸರು ಹುಡುಕಾಟ ನಡೆಸಿದ್ದರು. ಏ. 3ರಂದು ಮಧ್ಯರಾತ್ರಿ 1.52ರ ವೇಳೆ ಸ್ನೇಹಿತೆ ಜೊತೆ ನಡೆದುಕೊಂಡು ಬರುತ್ತಿದ್ದ ಯುವತಿಯ ಜೊತೆ ಆರೋಪಿ ಅಸಭ್ಯವಾಗಿ ವರ್ತಿಸಿದ್ದ. ಖಾಸಗಿ ಅಂಗ ಸ್ಪರ್ಶಿಸಿ, ಕಿರುಕುಳ ನೀಡಿದ್ದ ಎನ್ನಲಾಗಿದೆ.
ಈ ಕುರಿತು ಸಂತ್ರಸ್ತೆ ದೂರು ಸಲ್ಲಿಸಿದ್ದರು. ಘಟನೆ ನಂತರ ಆರೋಪಿ ಬೆಂಗಳೂರಿನಿಂದ ಪರಾರಿಯಾಗಿದ್ದ. ಆರೋಪಿ ಪತ್ತೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ಡಿಸಿಪಿ ಸಾರಾ ಫಾತೀಮಾ ರಚಿಸಿದ್ದರು. ತನಿಖಾ ತಂಡಗಳು ಕರ್ನಾಟಕ, ಕೇರಳದಲ್ಲಿ ಬೀಡು ಬಿಟ್ಟಿದ್ದವು. ಕೊನೆಗೂ ಆರೋಪಿ ಬಲೆಗೆ ಬಿದ್ದಿದ್ದು, ಕರೆ ತರಲಾಗುತ್ತಿದೆ.