ಮಂಗಳೂರ: ರಾಜ್ಯದ (Karnataka) ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕ ವಸ್ತು (Drugs) ಸಾಗಾಟದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಂಗಳೂರು ಪೊಲೀಸರು, ಮಾದಕ ವಸ್ತು ಸಾಗಾಟದ ಜಾಲ ಪತ್ತೆ ಮಾಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ (Mangaluru SP Anupam Agarwal) ಈ ಕುರಿತು ಮಾತನಾಡಿದ್ದು, ಜಿಲ್ಲೆಯಲ್ಲಿ 6 ತಿಂಗಳ ಹಿಂದೆ ಹೈದರ್ ಆಲಿ ಎಂಬಾತನನ್ನು ಬಂಧಿಸಲಾಗಿತ್ತು. ಆ ವೇಳೆ ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ನೈಜೀರಿಯಾ ಪ್ರಜೆಯೊಬ್ಬನೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪೀಟರ್ ಎಂಬ ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನಲ್ಲಿ ಆರು ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಜೊತೆ ಬಂಧಿಸಲಾಗಿತ್ತು ಎಂದಿದ್ದಾರೆ.
ಈ ಕುರಿತು ತನಿಖೆ ನಡೆಸಿದಾಗ ಇದರ ಹಿಂದೆ ಇನ್ನೊಬ್ಬ ವ್ಯಕ್ತಿ ಇರುವುದು ಪತ್ತೆಯಾಗಿತ್ತು. ಆರೋಪಿಗಳ ಮಾಹಿತಿ ಕಲೆ ಹಾಕಲು ಪೊಲೀಸರು ಆರು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ವಿದೇಶಿ ಮಹಿಳೆಯರು ಮಾದಕ ವಸ್ತು ಸಾಗಿಸುತ್ತಿರುವ ಕುರಿತು ಮಾಹಿತಿ ಗೊತ್ತಾಯಿತು. ಮಾರ್ಚ್ 14 ರಂದು ದೆಹಲಿಯಿಂದ ಬೆಂಗಳೂರಿಗೆ ಆ ಮಹಿಳೆಯರು ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟ (31) ಮತ್ತು ಅಬಿಗೈಲ್ ಅಡೋನಿಸ್ (30) ಬಂಧಿತರು. ಬಂಧಿತರು ಟ್ರಾಲಿ ಬ್ಯಾಗ್ನಲ್ಲಿ 75 ಕೋಟಿ ರೂಪಾಯಿ ಮೌಲ್ಯದ 37.878 ಕೆಜಿ ತೂಕದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ನಾಲ್ಕು ಮೊಬೈಲ್ ಫೋನ್ಗಳು, ಪಾಸ್ಪೋರ್ಟ್, 18 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬಂಧಿತರು ನಕಲಿ ವೀಸಾ ಹಾಗೂ ಪಾಸ್ ಪೋರ್ಟ್ ಬಳಕೆ ಮಾಡಿ ಈ ಕೃತ್ಯ ಎಸಗಿದ್ದಾರೆಂದು ಹೇಳಿದ್ದಾರೆ.