ಕೊಪ್ಪಳ: ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ವಿವಾದ ರಾತೋರಾತ್ರಿ ಮತ್ತೆ ಭುಗಿಲೆದ್ದಿದೆ. ಮಠದ ಆಡಳಿತ ನಡೆಸುವ ವಿಚಾರದಲ್ಲಿ ಈ ವಿವಾದ ತಲೆ ಎತ್ತಿದೆ.
ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ವಿಚಾರವಾಗಿ ಈ ವಿವಾದ ಭುಗಿಲೆದ್ದಿದೆ. ಬುಧವಾರ ರಾತ್ರಿ ಮಠದ ಕಾರ್ಯಕ್ರಮದಲ್ಲಿ ಮಂತ್ರಾಲಯದ ಸುಭದೇಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ಈ ವೇಳೆ, ಕೊಪ್ಪಳ ರಾಯರ ಮಠ, ಮಂತ್ರಾಲಯ ಮಠಕ್ಕೆ ಸೇರಿದೆ. 1971 ರಲ್ಲಿ ಮಂತ್ರಾಲಯ ಮಠಕ್ಕೆ ಸುಪರ್ದಿಗೆ ಕೊಟ್ಟ ದಾಖಲೆಗಳಿವೆ ಎಂದು ಹೇಳಿದರು. ಈ ವೇಳೆ ಕೆಲವು ಭಕ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇದು ಮಂತ್ರಾಲಯ ಮಠಕ್ಕೆ ಸೇರಿಲ್ಲ. ಇದು ಸ್ವತಂತ್ರ ಮಠ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ತುಲಾಭಾರ, ರಾಮದೇವರ ಪೂಜೆಯನ್ನು ಶ್ರೀಗಳು ರದ್ದು ಮಾಡಿ, ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಹೇಳಿ ಹೋದರು.