ಅದೊಂದು ಹೆಣ್ಣು ಮಗುವಿನ ಧಾರುಣ ಹತ್ಯೆ ʼದೊಡ್ಡವರʼ ನೆಮ್ಮದಿಗೆ ಕೊಳ್ಳಿ ಇಟ್ಟ ಪ್ರಕರಣ. ಆ ಹೆಣ್ಣು ಯಾವ ಪಾಪಿಗಳ ಕಾಮ ವಾಂಛೆಗೆ ಬಲಿಯಾದಳೋ ಆ ಭಗವಂತನೇ ಬಲ್ಲ. ಅಸಲಿಗೆ ಆಕೆಯ ಹಣೆ ಬರಹವೇ ಹಾಗಿದೆಯೋ ಏನೋ ಎಂಬಂತೆ ಸೌಜನ್ಯ ಸಾವಿಗೀಡಾಗುವ ದಿನ ಪ್ರಕೃತಿಯೂ ಆಕೆಗೆ ಮೋಸ ಮಾಡಲು ನಿಂತಂತಿತ್ತು. ಅಂದಿನ ಭಾರಿ ಮಳೆಯ ಹೊಡೆತಕ್ಕೆ ಆಕೆಯ ಕೊನೆ ಉಸಿರಿನ ಜೊತೆಗೆ ಸಾಕ್ಷಿಗಳೆಲ್ಲವೂ ನೀರಾಗಿ ಹರಿದು ಹೋಯ್ತು.
ಹೌದು, ಇಂದಿಗೂ ಸೌಜನ್ಯಳ ಸಾವಿನ ಸುತ್ತ ಬೀದಿ ಹೋರಾಟಗಳು ನಡೆಯುತ್ತಲೇ ಇವೆ. ಅವು ಸೌಜನ್ಯ ಪರವಾಗಿಯೂ ಹಾಗೂ ಸೌಜನ್ಯ ಹೋರಾಟಗಾರರ ವಿರುದ್ಧವಾಗಿಯೂ ಹೌದು. ಬೊಂಬಡಿ ಹೊಡೆಯುವವರು ದಾಖಲೆ ಸಲ್ಲಿಸುವ ಕಡೆ ಸಣ್ಣ ಯೋಚನೆಯನ್ನೂ ಈವರೆಗೂ ಮಾಡಿಲ್ಲ ಎನ್ನುವುದು ಈ ಸಮಾಜದ ದುರಂತವೇ ಸರಿ.
ಅಸಲಿಗೆ ಸೌಜನ್ಯಳ ಆತ್ಮವೂ ಇಂತಹದ್ದೊಂದು ಹೋರಾಟವನ್ನು ಬಯಸುತ್ತಿದೆ ಎಂದೇ ಅನ್ನಿಸುತ್ತಿದೆ. ಆಕೆಯನ್ನು ಚಿವುಟಿದಷ್ಟು ಚಿಗುರುತ್ತಿದ್ದಾಳೆ. ಆದರೇ, ಬಹುಶಃ ಆಕೆ ಸುಖಾಸುಮ್ಮನೇ ಬೊಂಬಡಿ ಹೊಡೆಯುವವರನ್ನೂ ಕ್ಷಮಿಸಲಾರಳು.
“ಸುಳ್ಳು ಮೆರೆಯಿತೆ ʼಸೌಜನ್ಯʼ ?”
ನಾವು ಯಾರೂ ಮಾನವರಾಗಿಲ್ಲ. ಇನ್ನೂ ಮಾನವರಾಗುವ ಪ್ರಯತ್ನದಲ್ಲೇ ಇದ್ದೇವೆ. ಆ ಪ್ರಯತ್ನದ ದಾರಿಯಲ್ಲಿ ಪದೆ ಪದೆ ಸೋಲುತ್ತಿದ್ದೇವೆ. ಪದೆ ಪದೆ ಧಾರ್ಷ್ಟ್ಯದಲ್ಲೇ ಮುಳುಗುತ್ತಿದ್ದೇವೆ. ಸತ್ಯದ ಮುಂದೆ ನಗ್ನಗೊಳ್ಳುವುದು, ನ್ಯಾಯದ ಮುಂದೆ ನಗ್ನಗೊಳ್ಳುವುದು. ಬರೀ ಇಂತವೇ ಆಗಿವೆ. ಸಮರ್ಥನೆಗೂ ಮಿತಿ ಇದೆ. ವಿರೋಧಕ್ಕೂ ಮಿತಿ ಇದೆ. ಆ ಮಿತಿಯ ಎಲ್ಲೆ ಮೀರಿದಾಗ ಆಗುವುದನ್ನು ಇಂದು ಸಮಾಜ ಕಂಡು ಮರುಗುತ್ತಿದೆ. ಯಾವುದನ್ನು ಉದ್ದೀಪಿಸಬೇಕೋ ಅದನ್ನು ಮತ್ತಷ್ಟು ಅದುಮಿ ನಾಶ ಮಾಡುವ ಪ್ರವೃತ್ತಿ, ‘ಧ್ವನಿ ಅಡಗಿಸುವ ಧೋರಣೆ’ ಈ ಜಗತ್ತಿಗಿಂತಲೂ ಹಳೆಯದು. ನಾವು ಯಾರೂ ಮಾನವರಾಗುವ ಪ್ರಯತ್ನವೇ ಮಾಡಿಲ್ಲ, ಆಗುವ ಯೋಚನೆಯಲ್ಲಿಯೂ ಇಲ್ಲ. ಈ ಸಮಾಜದಲ್ಲಿ ಇರವುದಕ್ಕೆ ನಾಚಿಕೆ ಪಡಬೇಕೋ ? ಅಥವಾ ಇಲ್ಲಿ ಆಗುತ್ತಿರುವ ಎಲ್ಲದರಲ್ಲೂ ಒಳಗೊಂಡು ಬೆತ್ತಲಾಗಬೇಕೋ ? ಈ ಜಗತ್ತಿಗೇ ಆಗುತ್ತಿರುವ ಅವಮಾನಗಳನ್ನು, ಅವ್ಯಾಹತವಾಗಿ ನಡೆಯುತ್ತಿರುವ ನಾಚಿಕೆಗೇಡಿನ ಕೃತ್ಯಗಳನ್ನು ಈ ಸಮಾಜದ ಮೇಲಿನ ಪದರ ತನ್ನ ಧಾವಂತದಲ್ಲಿ ನಿರಾಯಾಸವಾಗಿ ಮರೆತುಬಿಡಬಹುದು. ಆದರೇ ಇದೇ ಸಮಾಜದ ಅಂತಃಕರಣ ಅಷ್ಟು ಸುಲಭವಾಗಿ ಮರೆತು ಬಿಡುವುದಕ್ಕೆ ಸಾಧ್ಯವಿದೆಯೇ ? ಈ ಸಮಾಜಕ್ಕೆ ಆತ್ಮಸಾಕ್ಷಿ ಎನ್ನುವುದು ಇಲ್ಲವೆ ?
ಆ.15ಕ್ಕೆ ನಾವು ಮತ್ತೆ ಸ್ವಾತಂತ್ರೋತ್ಸವವನ್ನು ಆಚರಿಸಿಕೊಳ್ಳುತ್ತದೆ. ನಾವೆಲ್ಲರೂ ವಿಜೃಂಭಿಸುತ್ತೇವೆ. ಹಾಗೆ ವಿಜೃಂಭಿಸಬೇಕಾಗಿರುವುದು ನಮ್ಮ ಕರ್ತವ್ಯ. ಜವಾಬ್ದಾರಿಯೂ ಹೌದು. ಅದು ನಮ್ಮ ಹೆಮ್ಮೆ. ಅದು ನಮ್ಮ ದೇಶಭಕ್ತಿ. ಅದರಲ್ಲಿ ಕಿಂಚಿತ್ತೂ ಅನುಮಾನವೇ ಇಲ್ಲ. ಆದರೇ, ಈ ‘ಸ್ವಾತಂತ್ರ್ಯ ಎನ್ನುವುದು ತೋರಿಕೆಗೆ ಅಷ್ಟೇ ಆಗಬಾರದು. ಪುಸ್ತಕಗಳಿಗಷ್ಟೇ ಸೀಮಿತವಾಗಬಾರದು. ನಾವೆಲ್ಲರೂ ಸ್ವಾತಂತ್ರ್ಯ, ಸಂವಿಧಾನ, ಕಾನೂನು ಅಂತೆಲ್ಲಾ ಬೊಬ್ಬೆ ಹಾಕುತ್ತೇವೆ. ಇವು ನಿಜವಾದ ರೀತಿಯಲ್ಲಿ ಈ ನೆಲದ ಮೇಲೆ ಬಳಕೆಯಲ್ಲಿವೆಯೇ ? ಸರ್ವಸ್ವತಂತ್ರ್ಯದ ಬೇಡಿಕೆಯಲ್ಲ ಇದು ಅಥವಾ ಆ ಕಲ್ಪನೆಯೂ ಅಲ್ಲ. ಈ ದೇಶ ಮತ್ತೊಂದು ಸ್ವಾತಂತ್ರ್ಯ ಆಚರಿಸಿಕೊಳ್ಳುವುದುರೊಳಗೆ ಎಷ್ಟೆಲ್ಲಾ ದುಃಖದ ಮಡುವಿನಲ್ಲಿ ಬಿದ್ದು ಮುಳುಗಿದೆ ? ಎಷ್ಟೆಲ್ಲಾ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ ? ಎಂತಹ ಘೋರ ಘಟನೆಗಳು ಆಗಿ ಹೋಗಿವೆ ? ಕಾನೂನು ಎಷ್ಟು ಸುಧಾರಿಸಿದೆ ? ಎಷ್ಟು ಸತ್ಯ ಸಾಕ್ಷಿಗಳ ನಾಶವಾಗಿವೆ? ಎಷ್ಟು ಸತ್ಯ ಶೋಧನೆಯ ವರದಿಗಳು ಸುಳ್ಳನ್ನು ಮೆರೆದಾಡಿಸಿದೆ ? ಪ್ರಶ್ನೆ ಮಾಡಬೇಕಿದೆ.
“ಕಾನೂನು ದರ್ಬಲ !?”
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶಕ್ಕೆ ಒಂದು ಕಪ್ಪು ಚುಕ್ಕೆ ದೇಶದ ಕಾನೂನು ವ್ಯವಸ್ಥೆಗೆ ಒಂದು ದೊಡ್ಡ ಸವಾಲಾಗಿ ಕಂಡ ಪ್ರಕರಣ. ಸೌಜನ್ಯಳೆಂಬ ಒಬ್ಬ ಅಪ್ರಾಪ್ತ ಯುವತಿ ಅತ್ಯಂತ ಬೀಭತ್ಸವಾಗಿ ಅತ್ಯಾಚಾರವಾಗಿ ಕೊಲೆಯಾಗಿ ಬರೋಬ್ಬರಿ ಹದಿಮೂರು ವರ್ಷಗಳಾದರೂ ಅಪರಾಧಿಗಳು ಯಾರೆಂದು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿಲ್ಲ. ಈಗ ಪರ, ವಿರೋಧ ಚರ್ಚೆಗಳಾಗುತ್ತಿವೆ. ಈಗ ಸೌಜನ್ಯ ಪ್ರಕರಣ ಮಗ್ಗಲು ಬದಲಾಯಿಸಿದೆ. ಚರ್ಚೆಗಳು ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಮಸಲತ್ತಿನಲ್ಲಿ ಇದ್ದಂತಿವೆ. ಈ ಪ್ರಕರಣ ಈ ದೇಶದ ಕಾನೂನು ವ್ಯವಸ್ಥೆಯ ಆವ್ಯವಸ್ಥೆಯನ್ನು ಬೆತ್ತಲು ಮಾಡಿದೆ. ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು, ಬೇಜವಾಬ್ದಾರಿಯನ್ನು, ಹೊಣೆಗೇಡಿತನವನ್ನು ಬಟಾಬಯಲುಗೊಳಿಸಿದೆ. ಈ ನೆಲದಲ್ಲಿ ಆಗಾಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯಂತಹ ಪ್ರಕರಣಗಳು ಹಲವು ನಡೆದಿವೆ. ಇಂತಹ ನಾಚಿಕೆಗೇಡಿನ ಕೃತ್ಯಗಳು ನಡೆದಾಗಲೆಲ್ಲಾ ಈ ದೇಶ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದೆ. ಅಂದರೆ, ಈ ದೇಶದ ಕಾನೂನು ಸುಧಾರಣೆ ಆಗಬೇಕಿದೆ ಎನ್ನುವ ಅರ್ಥ, ಕಾನೂನು ಕಠಿಣವಾಗಿಲ್ಲ ಎಂದರ್ಥ.
ಸಾಮಾಜಿಕ ಸುರಕ್ಷತೆ ಎಲ್ಲಿದೆ ? ಭದ್ರತೆ ಎಲ್ಲಿದೆ? ಸೌಜನ್ಯಳಂತಹ ಅದೆಷ್ಟು ಹೆಣ್ಣು ಮಕ್ಕಳು ಹೀಗೆ ಆಗಿ ಹೋಗಿದ್ದಾರೆ ? ಸೌಜನ್ಯಳಂತಹ ಒಬ್ಬ ಹೆಣ್ಣು ಮಗಳಿಗೆ ಹದಿಮೂರು ವರ್ಷಗಳಾದರೂ ಇನ್ನೂ ನ್ಯಾಯ ದೊರಕಿಸಿ ಕೊಡುವುದಕ್ಕೆ ಸಾಧ್ಯವಾಗಿಲ್ಲ ಅಂತಾದರೇ ಇದು ಸಮಾಜದ ಉದಾಸೀನವೇ ಹೌದು.
“ಚಿವುಟಿದಷ್ಟು ಚಿಗುರುವ ಸೌಜನ್ಯ :”
ಸೌಜನ್ಯ ಪ್ರಕರಣ ಇಂದಿಗೂ ನಿಗೂಢ. ಒಬ್ಬ ಅಪ್ರಾಪ್ತ ಹುಡುಗಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳೇ ಯಾರದ್ದೋ ಪ್ರತಿಷ್ಠೆ, ಘನತೆ, ಗೌರವಗಳಿಗೆ ಧಕ್ಕೆ ಬಾರದಂತೆ ನೋಡಿಕೊಂಡಿರುವುದು ಅತ್ಯಂತ ದೊಡ್ಡ ವಿಷಾದನೀಯ ಸಂಗತಿ.
ಧರ್ಮಸ್ಥಳದಂತಹ ಒಂದು ಧಾರ್ಮಿಕ ಪವಿತ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂತಹದ್ದೊಂದು ಹೇಯ ಕೃತ್ಯ ನಡೆದಿದೆ ಎನ್ನುವುದೇ ದೊಡ್ಡ ದುರಂತಗಳಲ್ಲೊಂದು. ಪ್ರಕರಣ ನಡೆದು ಹದಿಮೂರು ವರ್ಷಗಳು ಕಳೆದು ಹೋದರೂ ಇಂದಿಗೂ ಅಪರಾಧಿ ಯಾರೆಂದು ಕಂಡು ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಈ ಪ್ರಕರಣದ ಸುತ್ತಲೂ ನಡೆದ ಎಲ್ಲಾ ಹಂತದ ತನಿಖೆಗಳಲ್ಲಿ ಸಾಕಷ್ಟು ಅನುಮಾನಗಳಿವೆ. ಪ್ರಕರಣದ ಸಾಕ್ಷ್ಯ ನಾಶ ಉದ್ದೇಶಪೂರ್ವಕವೇ ಮಾಡಲಾಗಿದೆ ಎನ್ನುವುದು ಸೌಜನ್ಯ ಪರ ಹೋರಾಟಗಾರರ ಆರೋಪ. ಪ್ರಕರಣಕ್ಕೂ ಧರ್ಮಸ್ಥಳ ದೇವಸ್ಥಾನಕ್ಕೆ ಸಂಬಂಧಿಸಿದ ಯಾವೊಬ್ಬ ವ್ಯಕ್ತಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನುವುದು ಇನ್ನೊಂದು ಕಡೆಯವರ ವಾದ.
ಇಂತಹ ಹಲವು ಪ್ರಕರಣಗಳ ಬಗ್ಗೆ ಸಮಾಜದ ಉದಾಸೀನವೂ ಸರ್ಕಾರದ ದಿವ್ಯ ಮೌನಕ್ಕೆ ಮೂಲ ಕಾರಣವೂ ಆಗಿದೆ. “ಬೇಟಿ ಬಚಾವೋ ಬೇಟಿ ಪಡಾವೋ” ಎನ್ನುತ್ತಲೇ ಅಧಿಕಾರಕ್ಕೇರಿದವರು ಸೌಜನ್ಯ ಪ್ರಕರಣಗಳಂತಹುದರಲ್ಲಿ ರಾಜಕೀಯದಲ್ಲಿ ಪಾಲ್ಪಡೆದಿದ್ದಾರೆ. “ಭಾಗ್ಯಗಳ ಮಾಲೆ”ಯನ್ನೇ ಕೊಟ್ಟವರು ಈ ಪ್ರಕರಣಕ್ಕೆ ನ್ಯಾಯ ಭಾಗ್ಯ ಕೊಡುವುದರಲ್ಲಿಯೂ ಮೀನಮೇಷ ಎಣಿಸಿದರು. ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹ ಕೇಳಿ ಬಂದಾಗ ಏನೂ ಆಗದಿರುವಂತೆ ವರ್ತಿಸಿತ್ತು. ಸಾಕ್ಷಿ ದೂರುದಾರನೊಬ್ಬ ಧರ್ಮಸ್ಥಳದಲ್ಲಿ ಒಬ್ಬ ʼಪ್ರಭಾವಿʼ ವ್ಯಕ್ತಿಯ ಸೂಚನೆಯಂತೆ ಅಸಹಜ ಸಾವಿಗೊಳಗಾದ ಶವಗಳನ್ನು ಹೂತಿದ್ದೇನೆ ಎಂದಾಗಲೂ ತಕ್ಷಣಕ್ಕೆ ತನಿಖೆಗೆ ವಹಿಸದೇ ಕಾದು ನೋಡುವ ತಂತ್ರ ಉಪಯೋಗಿಸಿತ್ತು. ಸೌಜನ್ಯಳ ಆಸೆಕಂಗಳ ಕನಸುಗಳನ್ನು ಚಿವುಟಿದವರಿಗೆ ಅವರವರ ಆತ್ಮಸಾಕ್ಷಿಯೇ ಶಿಕ್ಷಿಸಲಿ. ಆಕೆ ಚಿವುಟಿದಷ್ಟು ಚಿಗುರುತ್ತಿದ್ದಾಳೆ ಎನ್ನುವುದರಲ್ಲಿ ನೋ ಡೌಟ್.
ಪ್ರಜಾಪ್ರಭುತ್ವದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಸೌಜನ್ಯ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಹೆಣ್ಣನ್ನು ಇಷ್ಟೊಂದು ನೀಚವಾಗಿ ಅತ್ಯಾಚಾರವೆಸಗಿ ಕೊಂದು ಪ್ರಕರಣದ ತನಿಖೆಯ ದಾರಿಯನ್ನೇ ತಪ್ಪಿಸಿ, ಯಾವನನ್ನೋ ಅಪರಾಧಿ ಎಂದು ಜೈಲಲ್ಲಿರಿಸಿ, ಸಾಕ್ಷಿಯೇ ಇಲ್ಲದೇ ಆತನನ್ನು ದೋಷಮುಕ್ತನೆಂದು ಬಿಡುಗಡೆಗೊಳಿಸಿದ್ದು, ಒಬ್ಬ ನಿರಪರಾಧಿಯನ್ನು ಜೈಲಲ್ಲಿರಿಸಿ ಆತ ಮತ್ತು ಆತನ ಕುಟುಂಬ ಮಾನಸಿಕವಾಗಿ ಈ ಸಮಾಜದಿಂದ ತೆಗಳಿಕೆಗೆ ಒಳಗಾಗುವಂತೆ ಮಾಡಿದ್ದೆಲ್ಲವೂ ಈ ಸಮಾಜ ತಲೆತಗ್ಗಿಸುವಂತಹದ್ದಲ್ಲವೇ ? ಇಂತಹದ್ದೆಲ್ಲಾ ನಡೆದಿರುವುದಕ್ಕೆ ಮತ್ತೆ ನಿರಂತರವಾಗಿ ನಡೆಯುತ್ತಿರುವುದನ್ನು ನೋಡಿಕೊಂಡು ನಾವು ನೈತಿಕ ಸಮಾಜದ ನಿರೀಕ್ಷೆ ಮಾಡುವುದಾದರೂ ಹೇಗೆ ?
“ಸೌಜನ್ಯ ಮತ್ತು ಹೋರಾಟ !?”
ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ರಾಜ್ಯಾದ್ಯಂತ ವ್ಯಾಪಕ ಹೋರಾಟಗಳು ನಡೆದವು. “ಸೌಜನ್ಯ ಹೋರಾಟ ಸಮಿತಿ” ಸಾಕ್ಷಿ ನಾಶವಾದರೂ ಪ್ರಕರಣ ಜೀವಂತವಾಗಿರುವಂತೆ ಕಂಡುಕೊಂಡಿತ್ತು. ಪ್ರಕರಣದ ಲೋಪಗಳನ್ನು ಸಾರ್ವಜನಿಕವಾಗಿ ಎತ್ತಿ ತೋರಿಸುವಂತಹ ಬೀದಿ ಹೋರಾಟಗಳು ನಡೆದವು. ಸಿಬಿಐ ತನಿಖೆಯನ್ನು ಪ್ರಶ್ನಿಸುತ್ತಾ, ಅದು ಪ್ರಭಾವಿಗಳ ಒತ್ತಡಕ್ಕೆ ಮಣಿದಿದೆ ಎಂಬ ಗಂಭೀರ ಆರೋಪವೂ ಕೇಳಿಬಂತು. ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯ ಕೇಳಿಬಂತು. ತನಿಖೆಯಲ್ಲಿನ ಲೋಪಗಳನ್ನು ಸಾರ್ವಜನಿಕವಾಗಿ ಟೀಕಿಸುವ ಯತ್ನ ಹಲವು ಮಜಲುಗಳನ್ನು ಪಡೆಯಿತು. ವ್ಯಕ್ತಿ ನಿಂದನೆಯವರೆಗೂ ತಲುಪಿತು. ಸುದ್ದಿ ಪ್ರಸಾರವಾಗದಂತೆ ʼಕೋರ್ಟ್ ತಡೆಯಾಜ್ಞೆʼಯ ಪ್ರಯೋಗ, ಪ್ರತಿ ಪ್ರಯೋಗ ಎಲ್ಲವೂ ಉತ್ತುಂಗದಲ್ಲೇ ನಡೆಯಿತು.
ರಾಜ್ಯಾದ್ಯಂತ ಪ್ರತಿಭಟನೆಗಳು, ಮೆರವಣಿಗೆಗಳನ್ನು ಆಯೋಜಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಹಲವು ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ನಿರಂತರ ಹೋರಾಟಗಳನ್ನು ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸ್ಥಳೀಯ ಸಮುದಾಯಗಳು ಮತ್ತು ಸಂಘಟನೆಗಳು ಸೌಜನ್ಯ ಪರ ನಿಂತು ಧರಣಿಗಳನ್ನು ನಡೆಸಿದವು.
“ಸಂತೋಷ್ ಖುಲಾಸೆ : ಪರ ವಿರೋಧ”
ಸೌಜನ್ಯ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡ ನಂತರ, 2014ರಲ್ಲಿ ಸಂತೋಷ್ ರಾವ್ ಎಂಬ ವ್ಯಕ್ತಿಯನ್ನು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧನಕ್ಕೊಳಪಡಿಸಲಾಯಿತು. ಸಂತೋಷ್ ಗೂ, ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಆತನೊಬ್ಬ ಅಮಾಯಕ ಎಂಬ ಬಲವಾದ ವಿರೋಧ ಕೇಳಿ ಬಂತು. ನಿಶ್ಚಲ್ ಜೈನ್, ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್ ಈ ಕೃತ್ಯದಲ್ಲಿ ಪ್ರಮುಖ ಆರೋಪಿಗಳು, ಅವರನ್ನೇ ಬಂಧಿಸಬೇಕು ಎಂಬ ಕೂಗು ಕೇಳಿಬಂದವು. ಸಂತೋಷ್ ರಾವ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು ಮತ್ತು ಘಟನೆ ನಡೆದ ಸ್ಥಳದಲ್ಲಿ ಆತ ಪತ್ತೆಯಾದ ಎಂಬ ಕಾರಣಕ್ಕಾಗಿ ಪೊಲೀಸರು ಆತನನ್ನು ಪ್ರಮುಖ ಆರೋಪಿಯನ್ನಾಗಿ ಬಿಂಬಿಸಿದರು. ಸಿಬಿಐ ದೀರ್ಘಕಾಲದ ತನಿಖೆ ನಡೆಸಿ, ಸಂತೋಷ್ ರಾವ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಬರೋಬ್ಬರಿ 11 ವರ್ಷಗಳ ಸುದೀರ್ಘ ವಿಚಾರಣೆಯ ನಂತರ, 2023ರ ಜೂನ್ 16ರಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ಎಂಬಾತನನ್ನು ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಸಂತೋಷ್ ಖುಲಾಸೆಯ ಬಳಿಕ ಸೌಜನ್ಯ ಪರ ಹೋರಾಟಗಾರರ ನಡೆ ಇನ್ನೂ ಉಗ್ರ ರೂಪಕ್ಕೆ ತಾಳಿತ್ತು. ಯೂಟ್ಯೂಬ್ ವರದಿಗಳು, ಬೀದಿ ಹೋರಾಟಗಳು ಅವ್ಯಾಹತವಾಗಿ ನಡೆದವು. ಜನರಿಗೆ ಪ್ರಕರಣದ ತೀವ್ರತೆಯನ್ನು ತಿಳಿಸುತ್ತಿದ್ದೇವೆ ಎಂದು ಕಾನೂನನ್ನು ಮರೆತೇ ಬಿಟ್ಟರೆಂಬಂತೆ ನಡೆದುಕೊಂಡ ಪ್ರಸಂಗವೂ ನಡೆಯಿತು. ಪರ ವಿರೋಧ ಚರ್ಚೆಗಳು ಇನ್ನೆಂದೂ ಕಾಣದ ಮಟ್ಟಕ್ಕೆ ತಲುಪಿತು. ಸೌಜನ್ಯಳ ತಾಯಿಯನ್ನು ಬೀದಿ ಬೀದಿಗಳಲ್ಲಿ ಸೆರಗೊಡ್ಡಿ ಕಣ್ಣಿರು ಹಾಕಿಸುವಂತೆ ಕೆಳಮಟ್ಟದ ಪ್ರಚಾರಕ್ಕೂ ಹೋರಾಟಗಾರರು ಇಳಿದರು. ಇನ್ನೊಂದೆಡೆ ಆರೋಪ ಹೊತ್ತಿಕೊಂಡವರ ಕೃಪಾಶೀರ್ವಾದದಲ್ಲಿ ಹೋರಾಟಗಳು, ಯೂಟ್ಯೂಬ್ ವರದಿಗಳು ಆದವು. ಹೀಗೆ ಇದು ʼಬೀದಿ ವಾದ ಪ್ರತಿವಾದದಲ್ಲೇʼ ಕಳೆದುಹೋಯಿತು ಹೊರತು ದಾಖಲೆಗಳನ್ನು ಪೂರೈಸುವತ್ತ ಯಾರೂ ಮುಖ ಮಾಡಿಲ್ಲ.
“ಸಂತೋಷ್ ಖುಲಾಸೆಗೆ ಕೋರ್ಟ್ ನೀಡಿದ ಕಾರಣ :”
ಸಿಬಿಐ ನ್ಯಾಯಾಲಯಕ್ಕೆ ಆರೋಪಿಯನ್ನು ದೋಷಿ ಎಂದು ಸಾಬೀತುಪಡಿಸಲು ಬಲವಾದ, ನಿರ್ವಿವಾದದ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಾಧ್ಯವೇ ಆಗಿಲ್ಲ. ಅಪರಾಧಿ ಯಾರು ಎಂದು ಹೇಳುವುದಕ್ಕೂ ಸಾಧ್ಯವಾಗಿಲ್ಲ. ಇದೇ ಈ ಪ್ರಕರಣದ ʼನ್ಯಾಯಾಂಗ ಹೋರಾಟದ ಸೋಲುʼ.
ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ಪುರಾವೆಗಳು, ವೈದ್ಯಕೀಯ ವರದಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಸಂತೋಷ್ ರಾವ್ ಅವರ ವಿರುದ್ಧದ ಆರೋಪಗಳನ್ನು ದೃಢಪಡಿಸಲಿಲ್ಲ. ಸೌಜನ್ಯ ಮೃತದೇಹದ ಮೇಲೆ ಸಿಕ್ಕಿದ್ದ ಜೈವಿಕ ಮಾದರಿಗಳನ್ನು (ವೀರ್ಯದ ಕಣಗಳು) ಸರಿಯಾಗಿ ಸಂಗ್ರಹಿಸಿ, ಸಂರಕ್ಷಿಸಿಲ್ಲ ಎಂಬ ಆರೋಪವೂ ಇತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಕೆಲವು ಲೋಪಗಳು ಅತ್ಯಾಚಾರ ನಡೆದಿದೆಯೆಂದು ದೃಢಪಟ್ಟರೂ, ಅದನ್ನು ಸಂತೋಷ್ ರಾವ್‌ಗೆ ಸಂಬಂಧ ಕಲ್ಪಿಸುವ ಡಿಎನ್‌ಎ ಅಥವಾ ಇತರ ವೈದ್ಯಕೀಯ ಪುರಾವೆಗಳು ಇರಲಿಲ್ಲ ಅಥವಾ ವಿಶ್ವಾಸಾರ್ಹವಾಗಿರಲಿಲ್ಲ. ಕೆಲವು ಪ್ರಮುಖ ಸಾಕ್ಷಿಗಳು ಪೊಲೀಸರಿಗೆ ನೀಡಿದ ಹೇಳಿಕೆಗೂ, ಸಿಐಡಿ ತನಿಖೆಯಲ್ಲಿ ನೀಡಿದ ಹೇಳಿಕೆಗೂ ಮತ್ತು ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗೂ ಗಣನೀಯ ವ್ಯತ್ಯಾಸಗಳು ಕಂಡುಬಂದವು.
ಇವೆಲ್ಲಾ ಸಾಕ್ಷಿಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡಿಸಿತ್ತು. ಸಂತೋಷ್ ರಾವ್ ಅವರ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಎಂಬುದು ಒಂದು ಅಂಶವಾಗಿತ್ತು. ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿ ಇಂತಹ ಕೃತ್ಯ ಎಸಗುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಬಂತು. ಸಿಬಿಐ ತನಿಖೆ ಕೆಲವು ನಿರ್ಣಾಯಕ ಅಂಶಗಳನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತು. ಸ್ಥಳೀಯ ಪೊಲೀಸರು ಆರಂಭದಲ್ಲಿ ವಿಚಾರಣೆ ನಡೆಸಿದ್ದ ಇತರ ಶಂಕಿತರನ್ನು ಸಿಬಿಐ ಗಂಭೀರವಾಗಿ ಪರಿಗಣಿಸದೆ ಕೇವಲ ಸಂತೋಷ್ ರಾವ್ ಮೇಲೆ ಕೇಂದ್ರೀಕರಿಸಿದ್ದು, ಇದು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಅವಕಾಶವನ್ನು ಕಳೆದುಕೊಂಡಿತು ಎಂದು ಹೋರಾಟಗಾರರು ವಾದಿಸಿದರು. ಇನ್ನೊಂದು ಕಡೆಯವರು, ಅಂದರೇ ಆ ʼಪ್ರಭಾವಿ ವ್ಯಕ್ತಿʼಯ ಬೆಂಬಲಿಗರು ಎನ್ನಿಸಿಕೊಂಡವರು ಸಂತೋಷ್ ದೋಷಿ ಎಂದು ಹೇಳುವುದಕ್ಕೆ ಸಾಕ್ಷ್ಯಗಳಿಲ್ಲ ಎಂದಷ್ಟೇ ಕೋರ್ಟ್ ಹೇಳಿದೆ ಎಂದು ಸಮರ್ಥನೆಗಿಳಿದರು.
ಈ ಸೌಜನ್ಯ ಪ್ರಕರಣದಲ್ಲಿ ಪ್ರತಿಭಟನೆಗಳ ಒತ್ತಡಕ್ಕಾಗಿ ಸಂತೋಷ್ ರಾವ್ ನನ್ನು ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಸಿಲುಕಿಸಲಾಗಿತ್ತು ಎನ್ನುವುದೀಗ ಜಗಜ್ಜಾಹಿರಾಗಿದೆ. ಹಾಗಾದರೆ ಸಂತೋಷ್ ರಾವ್ ಈ ಪ್ರಕರಣದಲ್ಲಿ ನಿರ್ದೋಷಿಯಾದರೇ ನಿಜವಾದ ಅಪರಾಧಿ ಯಾರು? “ಇನ್ನೂ ಅಧಿಕೃತ ಉತ್ತರ ಸಿಗದ ಪ್ರಶ್ನೆ ಇದು”.
ಈ ಪ್ರಕರಣದಲ್ಲಿ ಸಂತೋಷ್ ರಾವ್ ನನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪ ಈಗಲೂ ಕೇಳಿಬರುತ್ತಿದೆ. ಬಹುಶಃ ಈ ದೇಶದಲ್ಲಿ ಬೇರೆ ಯಾವ ಪ್ರಕರಣವೂ ಇಷ್ಟೊಂದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿಲ್ಲ ಎಂದೇ ಹೇಳಬಹುದು. ಸಿಬಿಐ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆಯಾದರೂ, ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಪ್ರಕರಣದ ಮರುತನಿಖೆಗಾಗಿ ಎಸ್.ಐ.ಟಿ ರಚನೆಗೆ ಒತ್ತಾಯಿಸುತ್ತಲೇ ಇದ್ದಾರೆ. ಹೌದು, ಸೌಜನ್ಯಾಳಿಗೆ ನ್ಯಾಯ ಸಿಗೋದು ನ್ಯಾಯಾಲಯದಲ್ಲಿ ಮಾತ್ರ !
“ನಂಬಿಕೆ ಮತ್ತು ಪರ ವಿರೋಧ ಚರ್ಚೆ :”
ಧರ್ಮಸ್ಥಳ ಕ್ಷೇತ್ರದ ಮಂಜುನಾಥ, ಅಣ್ಣಪ್ಪ ಸ್ವಾಮಿಗೆ ದೇಶದಾದ್ಯಂತ ಅಪಾರ ಭಕ್ತ ವೃಂದವಿದೆ. ಅದೇ ಭಕ್ತಿ ಮತ್ತು ಗೌರವವನ್ನು ಭಕ್ತಸಾಗರ, ಖಾವಂದರ ಮನೆತನದ ಮೇಲೂ ಇರಿಸಿಕೊಂಡು ಬಂದಿದೆ. ಇದು ಭಕ್ತಿ ಮತ್ತು ನಂಬಿಕೆಯ ಪ್ರತೀಕ.
ಇದರಾಚಗೆ ಧರ್ಮಸ್ಥಳದ ಸೌಜನ್ಯ ಅತ್ಯಚಾರ ಮತ್ತು ಕೊಲೆ ಪ್ರಕರವನ್ನು ನೋಡಬೇಕಿದೆ. ಈ ವಿಚಾರದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಅವಹೇಳನ ಮಾಡಲಾಗುತ್ತಿದೆ ಎಂಬ ಕೂಗೆದ್ದಿದೆ. ಒಂದು ಹಂತದಲ್ಲಿ ಆ ಪ್ರಯತ್ನವೂ ನಡೆದಿತ್ತು. ಅಷ್ಟಾಗಿಯೂ ಧರ್ಮಸ್ಥಳದ ಮಂಜುನಾಥನ ಕ್ಷೇತ್ರದ ಮೇಲೆ ಅವಹೇಳನ ಮಾಡುವುದಕ್ಕೆ ಯಾರಿಗೆ ಧೈರ್ಯವಿದೆ ?
ಕೊಲೆ ಪ್ರಕರಣವನ್ನು ಧರ್ಮಸ್ಥಳದಲ್ಲಿ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದ ಆತ್ಯಾಚಾರ ನಡೆದದ್ದು ಎಂದು ಹೇಳದೇ ಮತ್ತೆಲ್ಲೋ ಆಗಿದ್ದು ಎಂದು ಹೇಗೆ ಹೇಳುವುದಕ್ಕೆ ಸಾಧ್ಯವಿದೆ? ಹಾಗೆಂದ ಮಾತ್ರಕ್ಕದು ಧರ್ಮಸ್ಥಳದ ಕ್ಷೇತ್ರದ ಮೇಲೆ ಮಾಡುವ ಅವಹೇಳನವಲ್ಲ. ಸೌಜನ್ಯಳಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರ ಕೂಗು ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರದ ವಿರುದ್ಧವಲ್ಲ ಎನ್ನುವುದನ್ನು ಸಮಾಜ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ.
ಇದರಲ್ಲಿ ಕ್ಷೇತ್ರದ ಹೆಸರಿಗೆ ಧಕ್ಕೆ ತರುವಂತಹ ವಿಚಾರವಾದರೂ ಏನಿದೆ? ಎಲ್ಲಿ ಈ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾದ ಸಂತೋಷ್ ರಾವ್ ದೋಷ ಮುಕ್ತನೆಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತೋ ಮತ್ತು ಈ ಪ್ರಕರಣ ಧರ್ಮಸ್ಥಳವನ್ನು ದಾಟಿ, ರಾಜ್ಯವನ್ನೂ ದಾಟಿ ದೇಶಮಟ್ಟದಲ್ಲಿ ಸುದ್ದಿಯಾಯಿತೋ ಅಂದು ಹಿಂದೆಂದೂ ಕಾಣಿಸಿಕೊಳ್ಳದ ಪ್ರತಿಭಟನೆಯ ಕಾವು ಧರ್ಮಸ್ಥಳ, ಉಜಿರೆಯಲ್ಲಿ ಮೇಲಕ್ಕೆದ್ದಿದೆ. ಅದು ಖಾವಂದರ ಪರವಾದ ಪ್ರತಿಭಟನೆ ಎಂಬಂತೆ ಕಾಣಿಸಿಕೊಂಡಿತೇ, ಹೊರತು ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಗೆ ನ್ಯಾಯ ಬೇಕೆಂದಲ್ಲ. ‘ಇದು ಖಾವಂದರ ಹೆಸರಿಗೆ ಧಕ್ಕೆ ಬರಬಾರದು ಎಂಬುದಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ’ ಎಂದು ಮಾಧ್ಯಮಗಳಿಗೆ ಸೌಜನ್ಯಳ ತಾಯಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಪ್ರಸಂಗವೂ ಇಲ್ಲಿ ಮುಖ್ಯ. ಸೌಜನ್ಯಳ ತಾಯಿ ಮತ್ತು ಆ ಕುಟುಂಬದವರು ಕೂಡ ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಯ ಭಕ್ತರೆಂಬುವುದು ಇಲ್ಲಿ ವೆರಿ ವೆರಿ ಇಂಪಾರ್ಟೆಂಟ್.
ಸೌಜನ್ಯ ನ್ಯಾಯಕ್ಕಾಗಿ ನಡೆದ ಬೀದಿ ಹೋರಾಟದಲ್ಲಿ ಹೆಗ್ಗಡ ಕುಟುಂಬದ ಆಪ್ತ ಎಂದು ಹೇಳಲಾಗುತ್ತಿರುವ ಮಹಾವೀರ್ ಜೈನ್ ಎಂಬಾತ ಪ್ರತಿಭಟನೆಗೆ ಬಂದಿದ್ದ. ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ವೀಡಿಯೋ ಕೂಡ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಯಿತು. ಇದು ಸಾಕ್ಷ್ಯ ನಾಶದ ಪ್ರಯತ್ನವೇ? ನೊಂದವರ ಧ್ವನಿ ಅಡಗಿಸುವ ಯತ್ನವೇ? ಎಲ್ಲಿದೆ ನ್ಯಾಯ?
“ಪದ್ಮಲತಾ ಟು ಸೌಜನ್ಯ :”
1987ರಲ್ಲಿ 17 ವರ್ಷದ ಬಾಲಕಿ ಪದ್ಮಲತಾ ಕೊಲೆ ಪ್ರಕರಣವನ್ನು ಈ ಸೌಜನ್ಯ ಪ್ರಕರಣ ನೆನಪಿಸದೇ ಇರಲಾರದು. ಪದ್ಮಲತಾಳನ್ನು ಅಪಹರಿಸಿ ಸುಮಾರು 39-40 ದಿನಗಳ ಕಾಲ ಕೂಡಿಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. 40ನೇ ದಿನ ಗೋಣಿ ಚೀಲದಲ್ಲಿ ಪದ್ಮಲತಾಳ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಈ ಕೃತ್ಯದ ವಿರುದ್ಧವೂ ಧರ್ಮಸ್ಥಳದ ಸುತ್ತಮುತ್ತ ಬೃಹತ್ ಹೋರಾಟಗಳು ನಡೆದವು. ಕಾಲಾಂತರದಲ್ಲಿ ಪ್ರಕರಣ ನಡೆಯಲೇ ಇಲ್ಲ ಎಂಬಂತೆ ಮುಚ್ಚಿಹೋಯ್ತು. ಸಾಕ್ಷ್ಯಗಳನ್ನು ನಾಶ ಮಾಡಲಾಯಿತಂತೆ, ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ನಂಬಿಸಿ ಪ್ರಕರಣವನ್ನೇ ಏನೂ ಆಗಿಲ್ಲ ಎಂಬಂತೆ ಮಾಡಲಾಯಿತಂತೆ, ಧರ್ಮಸ್ಥಳದ ರಾಜಕೀಯ ಮತ್ತು ಪ್ರತಿಷ್ಠೆ ಈ ಅತ್ಯಚಾರ ಮತ್ತು ಕೊಲೆ ಪ್ರಕರಣದ ಹಿಂದೆ ಪ್ರಭಾವ ಬೀರಿತ್ತು ಎಂಬುವುದು ಅಂತೆಕಂತೆಗಳ ಸುದ್ದಿ ಮತ್ತು ಬಲ್ಲಮೂಲಗಳು ಕೂಡ ಇದನ್ನೇ ಹೇಳುತ್ತವೆ.
ಇನ್ನು, ಸಂತೋಷ್ ರಾವ್ ಪರ ವಕೀಲ ಮೋಹಿತ್ ಕುಮಾರ್ ಹೇಳುವ ಪ್ರಕಾರ, ಪ್ರಕರಣದ ಸಂಬಂಧ ಸಾಕ್ಷಾಧಾರ ಕೊರತೆಯಿಂದ ಸಂತೋಷ್ ರಾವ್ ಅವನನ್ನು ಖುಲಾಸೆಗೊಳಿಸಿದ್ದಲ್ಲ, ಸಂತೋಷ್ ಸೌಜನ್ಯಳನ್ನು ಅತ್ಯಚಾರ ಮತ್ತು ಕೊಲೆ ಮಾಡಿದ್ದಕ್ಕೆ ಯಾವುದೇ ಸಾಕ್ಷಿಗಳೇ ಇರಲಿಲ್ಲ. ಸಂತೋಷ್ ರಾವ್ ಒಬ್ಬ ಈ ಪ್ರಕರಣದಲ್ಲಿ ಬಲಿಪಶು. ‘ದೆರ್ ಈಸ್ ನೋ ಎವಿಡೆನ್ಸ್ ಟು ಕನೆಕ್ಟ್ ದಿ ಅಕ್ಯುಸ್ಡ್’ ಎನ್ನುವುದಕ್ಕೂ ‘ಲ್ಯಾಕ್ ಆಫ್ ಎವಿಡೆನ್ಸ್’ ಎನ್ನುವುದಕ್ಕೂ ವ್ಯತ್ಯಾಸವಿದೆ ಎಂದು ಜಡ್ಜ್ ಮೆಂಟ್ ಪ್ರತಿ ಹಿಡಿದು ವಿವರಿಸುತ್ತಾರೆ ವಕೀಲ ಮೋಹಿತ್ ಕುಮಾರ್. ಜಡ್ಜ್ ಮೆಂಟ್ ಹೇಳಿರುವುದು ಸಂತೋಷ್ ರಾವ್ ಸೌಜನ್ಯಳನ್ನು ಅತ್ಯಚಾರ ಮಾಡಿ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾದರೇ ಪ್ರಕರಣ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಕಾರಣವೇನು? ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಈ
ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ “ಪ್ರಭಾವಿ”ಗಳೊಂದಿಗೆ ಕೈ ಜೋಡಿಸಿತ್ತೆ ? ಸಂತೋಷ್ ಕುಟುಂಬ ಈ ಪ್ರಕರಣದಲ್ಲಿ ಸಮಾಜದಿಂದ ಎದುರಿಸಿದ ಅಪಮಾನವನ್ನು ಸರಿ ಮಾಡುವವರು ಯಾರು? ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡುವವರು ಯಾರು? ಸತ್ಯದ ಪರವಾಗಿ ನಿಲ್ಲಬೇಕಾಗಿದ್ದ ಸಾಕ್ಷ್ಯಗಳು, ತನಿಖಾಧಿಕಾರಿಗಳು ಸತ್ಯವನ್ನು ಮುಚ್ಚಿಟ್ಟವೆ/ಟ್ಟರೆ? ಹದಿನೇಳರ ಹರೆಯದ ಉಜಿರೆಯ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅದೆಷ್ಟು ಕನಸುಗಳನ್ನು ನಕ್ಷತ್ರಗಳನ್ನಾಗಿಸುವ ಬಯಕೆಯನ್ನು ತನ್ನ ಎದೆಯೊಳಗೆ ಬಂದಿಸಿಟ್ಟಿದ್ದಳೋ ಏನೋ, ಅತ್ಯಂತ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಶವವಾಗಿ ಈ ದೇಶದ ತನಿಖಾ ವ್ಯವಸ್ಥೆಯ ಅವ್ಯವಸ್ಥೆಯನ್ನು ನಗ್ನಗೊಳಿಸಿದ್ದಂತೂ ಸತ್ಯ.
‘ಸಾಕ್ಷ್ಯ ನಾಶ’ ಈ ದೇಶದ ಉದ್ದಗಲಕ್ಕೂ ನಡೆದ ಇಂತಹ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಮಾಡಿಕೊಂಡು ಬಂದ ಪರಂಪರೆ. ಸಮಾಜ ನೈತಿಕವಾಗಿ ಎಷ್ಟು ಕುಸಿದಿದೆ ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ. ಕೊಲೆ, ಅತ್ಯಾಚಾರವೆಸಗಿದವ ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಾಬಲ್ಯ ಹೊಂದಿದವನಾಗಿದ್ದರೇ, ಅವನಿಗೆ ಕಾನೂನಿನಿಂದ ರಕ್ಷಿಸಿಕೊಳ್ಳುವುದಕ್ಕೆ ಸಾವಿರ ದಾರಿಗಳಿವೆ. ನ್ಯಾಯವಾದಿಯನ್ನು ನೇಮಿಸಿಕೊಳ್ಳುವುದರಿಂದ ಹಿಡಿದು ಇಡೀ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಾಯಿಸುವವರೆಗೆ, ಪ್ರಕರಣದ ಸಾಕ್ಷ್ಯವನ್ನೇ ಸರ್ವನಾಶ ಮಾಡುವವರೆಗೆ, ಇದು ನೈತಿಕತೆ ಕಳೆದುಕೊಂಡ ವ್ಯವಸ್ಥೆ ತೆರೆದಿಟ್ಟ ಅವಕಾಶಗಳು ಎನ್ನುವುದು ದುರಂತ.
“ಮಗ್ಗಲು ಬದಲಿಸಿದ “ಸೌಜನ್ಯ” !”
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜವವಾಗಿ ಸಾವನ್ನಪ್ಪಿದ್ದ ಶವಗಳನ್ನು ಆ ʼಪ್ರಭಾವಿʼ ವ್ಯಕ್ತಿಯ ನಿರ್ದೇಶನದೊಂದಿಗೆ ಧರ್ಮಸ್ಥಳದಲ್ಲೇ ಈ ಹಿಂದೆ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ಒಬ್ಬ ಅನಾಮಧೇಯ ವ್ಯಕ್ತಿಯಿಂದ ಗಂಭೀರ ಆರೋಪಗಳು ಕೇಳಿ ಬಂತು. ಇದರಿಂದ ಸೌಜನ್ಯ ಪ್ರಕರಣದ ಹೋರಾಟ ಹೊಸ ರೂಪ ಪಡೆದುಕೊಂಡಿತು.
1995 ರಿಂದ 2014 ರವರೆಗೆ ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ನೇತ್ರಾವತಿ ನದಿ ತಟದಲ್ಲಿ, ಕಾಡಿನಲ್ಲಿ ಹೂತುಹಾಕಿದ್ದಾಗಿ ಸಾಕ್ಷಿ ದೂರುದಾರ ತಿಳಿಸಿದ್ದಾನೆ. ಇದರಲ್ಲಿ ಕೆಲವು ಶವಗಳು ಮಹಿಳೆಯರು ಮತ್ತು ಅಪ್ರಾಪ್ತರದ್ದಾಗಿದ್ದವು, ಕೆಲವು ಲೈಂಗಿಕ ದೌರ್ಜನ್ಯದ ಕುರುಹುಗಳನ್ನು ಹೊಂದಿದ್ದವು ಎಂದು ಆತ ದೂರು ನೀಡಿದ್ದು, ಸಾಮಾಜಿಕ ವಲಯದಲ್ಲಿ ಹೊಸ ಆತಂಕ, ಅನುಮಾನಗಳು ಮೂಡುವುದಕ್ಕೆ ಪ್ರಮುಖ ಕಾರಣವಾಯಿತು.
“ಶವ ಹೂತಿಟ್ಟ ಪ್ರಕರಣ : ದೂರು”
ಜುಲೈ 11ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಆತ ನೀಡಿದ ಹೇಳಿಕೆಗಳು ಇಡೀ ರಾಜ್ಯದ ಜನತೆಗೆ ಆಘಾತ ಮೂಡಿಸಿತು. 16 ವರ್ಷಗಳ ಸೇವಾವಧಿಯಲ್ಲಿ, “ನೂರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಶವಗಳನ್ನು ಹೂತುಹಾಕುವಂತೆ ತನಗೆ ಬಲವಂತ ಮಾಡಲಾಯಿತು” ಎಂದು ಆತ ಆರೋಪಿಸಿದ್ದಾನೆ. ಆತನ ಆರೋಪಕ್ಕೆ ಪುಷ್ಟಿ ನೀಡುವಂತೆ ನ್ಯಾಯಾಲಯಕ್ಕೆ ಮಾನವ ಅಸ್ಥಿಪಂಜರದ ಭಾಗವೊಂದನ್ನು ತಂದು ಹಾಜರುಪಡಿಸಿದ್ದು, ಪ್ರಕರಣದ ಗಂಭೀರತೆಯನ್ನು ಎತ್ತಿ ಹಿಡಿದಿದೆ.
“ಶವಗಳನ್ನು ಹೂಳದಿದ್ದರೆ ನನ್ನನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು” ಎಂದು ಆ “ಪ್ರಭಾವಿ” ಮೇಲೆ ಆರೋಪ ಹೊರಿಸಿದ್ದ. ತನ್ನ ಆರೋಪಗಳನ್ನು ಪುಷ್ಟೀಕರಿಸಲು ಶವಗಳ ಅವಶೇಷಗಳ ಫೋಟೋಗಳನ್ನೂ ಪೊಲೀಸರಿಗೆ ಸಲ್ಲಿಸಿದ್ದಾನೆ ಎನ್ನಲಾಗಿದೆ. ಎಸ್. ಐ. ಟಿ ರಚನೆಯೂ ಆಗಿದೆ.
“ಯುಡಿಆರ್ ದಾಖಲೆಗಳೇ ಇಲ್ಲ !”
2000 ಇಸವಿಯಿಂದ 2015ರ ನಡುವೆ ದಾಖಲಾದ ಅಸಹಜ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳನ್ನು(ಯುಡಿಆರ್) ಮಾಯವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸಾಕ್ಷಿ ದೂರುದಾರ ಹೇಳಿರುವ ʼಆ ಪ್ರಭಾವಿʼ ವ್ಯಕ್ತಿಯೊಂದಿಗೆ ಮಸಲತ್ತು ನಡೆಸಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿದೆ ಎಂದು ದೂರುದಾರ ಹೇಳಿರುವುದರಿಂದ ಈಗ ದಾಖಲೆಗಳ ನಾಶವಾಗಿದೆ ಎಂದು ಆರ್.ಟಿ.ಐ ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ ಬಯಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಪೊಲೀಸರು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವುದು ಬೆಳಕಿಗೆ ಬಂದಿದೆ.
ನಿರ್ದಿಷ್ಟವಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ (ಸಿಆರ್‌ಪಿಸಿ) ಸೆಕ್ಷನ್ 174(ಎ) ಅಡಿಯಲ್ಲಿ 15 ವರ್ಷಗಳ ಅವಧಿಯಲ್ಲಿ ದಾಖಲಾದ ಯುಡಿಆರ್ ವಿವರಗಳನ್ನು ಆರ್ ಟಿಐನಡಿ ಕೇಳಲಾಗಿತ್ತು. ಆರ್ ಟಿಐನಡಿ ಕೇಳಲಾದ ದಾಖಲೆಗಳು ಲಭ್ಯವಿಲ್ಲ, ವಿವಿಧ ಸುತ್ತೋಲೆಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
“ಎಸ್.ಐ.ಟಿ ತನಿಖೆಯ ಸವಾಲುಗಳೇನು ?”
ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಉದ್ಯಮಿಗಳ ಮೂಲಕ ಬೇರೆ ಬೇರೆ ರೀತಿಯ ಒತ್ತಡಗಳನ್ನು ದಿನ ನಿತ್ಯ ಎದುರಿಸಬೇಕಾಗಿರುವ ಪೊಲೀಸ್ ಅಧಿಕಾರಿಗಳ ಸ್ಥಿತಿ ಹೇಗಿರಬಹುದು? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಸಾಮಾನ್ಯವಾಗಿದೆ. ವಿಪರ್ಯಾಸವೆಂದರೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತಂಡದಲ್ಲಿ ಇರುವ ಏಕೈಕ ಮಹಿಳಾ ಐಪಿಎಸ್ ಅಧಿಕಾರಿ ಹಿಂದೆ ಸರಿದಿದ್ದಾರೆ.
ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಗಳು ನಡೆದಿವೆ ಎನ್ನುವ ವ್ಯಾಪಕ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಉನ್ನತ ಅಧಿಕಾರಿಯೊಬ್ಬರು ತನಿಖಾ ತಂಡದಲ್ಲಿ ಇರುವುದು ಅತ್ಯಗತ್ಯವಾಗಿತ್ತು. ಹಾಗೆಯೇ ತನಿಖಾ ತಂಡದ ಪೊಲೀಸ್ ಅಧಿಕಾರಿಗಳ ಮೇಲೆ ಯಾವುದೇ ಒತ್ತಡಗಳು ಬೀಳದಂತೆ ಮುತುವರ್ಜಿ ವಹಿಸಬೇಕಿರುವುದು ಸರ್ಕಾರದ ಪ್ರಮುಖ ಜವಾಬ್ದಾರಿ. ರಾಜಕಾರಣಿಗಳು ಎಸ್.ಐ.ಟಿ ತಂಡದೊಂದಿಗೆ ಅಂತರವನ್ನು ಕಾಪಾಡಬೇಕಲ್ಲದೇ ತನಿಖೆಗೆ ಸಂಬಂಧಿಸಿ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ತಂಡಕ್ಕೆ ನೀಡಬೇಕಾಗಿರುವುದು ಕೂಡ ಮುಖ್ಯ. ಹಾಗಾದಲ್ಲಿ ಮಾತ್ರ ತನಿಖೆ ಒಂದು ತಾರ್ಕಿಕ ಅಂತ್ಯವನ್ನು ಮುಟ್ಟುವುದಕ್ಕೆ ಸಾಧ್ಯ. ಇಲ್ಲವಾದಲ್ಲಿ ಧರ್ಮಸ್ಥಳದಲ್ಲಿ ಸಾಕ್ಷಿ ದೂರುದಾರ ಸೂಚಿಸಿದ ಸ್ಥಳವನ್ನು ಅಗೆದು ಬರಿಗೈಯಲ್ಲಿ ವಾಪಾಸ್ ಬರುವಂತಹ ಪರಿಸ್ಥಿತಿಗೆ ಎಸ್.ಐ.ಟಿ ತಂಡ ಕಾರಣವಾಗಬಹುದು.
ಎಸ್.ಐ.ಟಿ ತನಿಖೆಗೆ ಡಾ. ನಾಗಲಕ್ಷ್ಮೀ ಚೌದರಿ ಒತ್ತಾಯ !
ಪ್ರಸ್ತುತ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ತನಿಖೆಗೆ ವ್ಯಾಪಕ ಒತ್ತಡ ಬರಲು ಪ್ರಮುಖ ಕಾರಣ, 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅನುಭವಿಸಿದ ಕಹಿ ಪಾಠ. ಅನಾಮಧೇಯ ವ್ಯಕ್ತಿಯೊಬ್ಬನ ಆರೋಪದ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ, ಆರೋಪದ ಗಂಭೀರತೆಯನ್ನು ಅರ್ಥೈಸಿಕೊಂಡು ಮುಖ್ಯಮಂತ್ರಿಗಳಿಗೆ ಎಸ್.ಐ.ಟಿ ರಚನೆಯಾಗಬೇಕು ಎಂದು ಪತ್ರ ಬರೆದು ಒತ್ತಾಯಿಸಿದರು. ಸೌಜನ್ಯಪರ ಹೋರಾಟಗಾರರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾರ್ವಜನಿಕರ ಸಹಿ ಸಂಗ್ರಹಿಸುವ ಮೂಲಕ ಎಸ್.ಐ.ಟಿ ರಚನೆಗೆ ಆಗ್ರಹಿಸಿದರು. ರಾಜ್ಯ ಸರ್ಕಾರ ಒತ್ತಾಯಕ್ಕೆ ಮಣಿದು ಹಿರಿಯ ಪೊಲೀಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್.ಐ.ಟಿ ರಚನೆಯನ್ನೂ ಮಾಡಿತು. ಎಸ್.ಐ.ಟಿ ತನಿಖಾ ತಂಡ ಸಾಕ್ಷಿ ದೂರುದಾರನ ಸಮ್ಮುಖದಲ್ಲೇ ನೇತ್ರಾವತಿ ನದಿ ತಟ ಹಾಗೂ ಕಾಡಿನಲ್ಲಿ ಶವ ಹೂತಿಟ್ಟ ಜಾಗದ ಉತ್ಖನನ ಕಾರ್ಯಾಚರಣೆ ಆರಂಭಿಸಿತು. ಸಾಕ್ಷಿ ದೂರುದಾರ ಸೂಚಿಸಿದ ಕೆಲವು ಸ್ಥಳದಲ್ಲಿ ಏನೂ ದೊರಕಿಲ್ಲ, ಕೆಲವು ಸ್ಥಳದಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳೂ ಪತೆಯಾದವು. ತನಿಖೆ ಮುಂದುವರಿದಿದೆ.
ಸೌಜನ್ಯ ಪ್ರಕರಣ ಕರ್ನಾಟಕದ ನ್ಯಾಯ ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಅಲುಗಾಡಿಸಿದ ಒಂದು ಪ್ರಮುಖ ಪ್ರಕರಣವಾಗಿದೆ. ಈ ಪ್ರಕರಣಕ್ಕೆ ನ್ಯಾಯ ಸಿಗದೇ ಇರುವುದು, ಪ್ರಸ್ತುತ “ಮೃತದೇಹಗಳನ್ನು ಹೂತುಹಾಕಿದ ಪ್ರಕರಣ”ದಲ್ಲಿ ಎಸ್.ಐ.ಟಿ ತನಿಖೆಗೆ ಒತ್ತಾಯಿಸಲು ಬಲವಾದ ಕಾರಣವಾಗಿದೆ.
ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣಕ್ಕೂ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರೇ ಎಸ್.ಐ.ಟಿ ರಚನೆ ಮಾಡುವುದಕ್ಕೆ ಒತ್ತಾಯಿಸಿದ್ದರು. ಎಸ್.ಐ.ಟಿ ತನಿಖಾ ವರದಿಯ ಆಧಾರದ ಮೇಲೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣ ದೂಷಿ ಎಂದು ಇತ್ತೀಚೆಗಷ್ಟೇ ತೀರ್ಪು ನೀಡಿದೆ. ಈ ತೀರ್ಪಿನ ಬಳಿಕ ತನಿಖಾ ತಂಡದ ಮೇಲೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕೊಂಚ ಭರವಸೆ ಮೂಡಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ತೀರ್ಪು ಬಂದಂತೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಹೇಳಿದ ಆ ʼಪ್ರಭಾವಿʼಯ ವಿರುದ್ಧ ತೀರ್ಪು ಬರಬಹುದೆಂಬ ನಿರೀಕ್ಷೆ ಇದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ತನಿಖೆ ಪ್ರಗತಿಯಲ್ಲಿರುವವರೆಗೆ ಈ ಪ್ರಕರಣ ಜೀವಂತವಾಗಿರಲಿದೆ. ಲೆಟ್ಸ್ ವೈಟ್ ಅಂಡ್ ವಾಚ್.
– ಶ್ರೀರಾಜ್ ವಕ್ವಾಡಿ



















