ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಸತತ 2ನೇ ಜಯ ದಾಖಲಿಸಿದೆ.
ಇಂದು ಪುದುಚೇರಿ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 3 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪುದುಚೇರಿ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತ್ತು. ತಂಡದ ಪರ ಮಧ್ಯಮ ಕ್ರಮಾಂಕದ ನಾಯಕ ಅರುಣ್ ಕಾರ್ತಿಕ್ 71 ರನ್ಗಳ ಕಾಣಿಕೆ ನೀಡಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು.
ಅಮನ್ ಹಕೀಮ್ ಖಾನ್ ಕೂಡ 45 ರನ್ ಗಳ ಕಾಣಿಕೆ ನೀಡಿದರು. ಇನ್ನುಳಿದಂತೆ ಯಾವುದೇ ಆಟಗಾರ ಉತ್ತಮ ಪ್ರದರ್ಶನ ತೋರಲು ವಿಫಲರಾದರು. ಕರ್ನಾಟಕ ಪರ ವಿದ್ಯಾಧರ ಪಾಟೀಲ್ 4, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್ ಗಳಿಗೆ ತಂಡವು ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ನಿಖಿನ್ ಜೋಶ್ 10 ರನ್, ನಾಯಕ ಮಯಾಂಕ್ ಕೂಡ 18 ರನ್, ಅನೀಶ್ 15 ರನ್ ಗೆ ಸುಸ್ತಾದರು. 4ನೇ ಕ್ರಮಾಂಕದಲ್ಲಿ ಬಂದ ಸ್ಮರಣ್ ರವಿಚಂದ್ರನ್ ಉತ್ತಮ ಪ್ರದರ್ಶನ ತೋರಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಏಕಾಂಗಿ ಹೋರಾಟ ನಡೆಸಿದ ಸ್ಮರಣ್ ಅಜೇಯ ಶತಕ ಸಿಡಿಸಿದಲ್ಲದೆ ತಂಡಕ್ಕೆ ಜಯ ತಂದು ಕೊಟ್ಟರು. 87 ಎಸೆತಗಳನ್ನು ಎದುರಿಸಿದ ಸ್ಮರಣ್ 10 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದರು. ಪರಿಣಾಮ ಕರ್ನಾಟಕ ತಂಡವು 7 ವಿಕೆಟ್ ಕಳೆದುಕೊಂಡು 40.5 ನೇ ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.