ಭಾರತದ ಅಂಡರ್-19 ಮಹಿಳಾ ತಂಡ ಗೆಲುವಿನ ಅಭಿಯಾನ ಮುಂದುವರೆಸಿದೆ. ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ 2025 ರ ಸೂಪರ್-6 ಸುತ್ತಿನಲ್ಲಿ ಬಾಂಗ್ಲಾದೇಶದ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ.
ಏಕಪಕ್ಷೀಯ ಗೆಲುವು
ಭಾರತ ತಂಡವು ಬಾಂಗ್ಲಾ ವಿರುದ್ಧ ಸವಾರಿ ಮಾಡಿತು. ಹೀಗಾಗಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಭಾರತದ ಬೌಲರ್ ಗಳು ಸ್ಮರಣೀಯ ಪ್ರದರ್ಶನ ತೋರಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 64 ರನ್ ಗಳಿಸಿತು.
ಬಾಂಗ್ಲಾ ಪರ ನಾಯಕಿ ಸುಮೈಯಾ ಅಖ್ತರ್ ಗರಿಷ್ಠ 21 ರನ್ ಗಳಿಸಿದರು. ಅವರನ್ನು ಬಿಟ್ಟರೆ ಬೇರೆ ಯಾವ ಆಟಗಾರರೂ 20ರ ಗಡಿ ದಾಟಲಿಲ್ಲ. ಭಾರತ ತಂಡದ ಪರ ವೈಷ್ಣವಿ ಶರ್ಮಾ 4 ಓವರ್ ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಅಲ್ಲದೇ, ಶಬ್ನಮ್ ಶಕೀಲ್, ಜೋಶಿತಾ ವಿಜೆ ಮತ್ತು ಗೊಂಗಡಿ ತ್ರಿಶಾ ತಲಾ ಒಂದು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಭಾರತ
65 ರನ್ ಗಳ ಗುರಿ ಬೆನ್ನಟ್ಟಿದ ಭಾರತ ತಂಡ 2 ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಗೊಂಗಡಿ ತ್ರಿಶಾ 31 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 40 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಸಾನಿಕಾ ಚಲ್ಕೆ 11 ರನ್ ಮತ್ತು ನಿಕ್ಕಿ ಪ್ರಸಾದ್ 5 ರನ್ ಗಳಿಸಿ ಅಜೇಯರಾಗಿ ಉಳಿದು ಗೆಲುವಿನ ದಡ ಸೇರಿಸಿದರು. ಭಾರತ ತಂಡ ಕೂಡ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಒಂದಾಗಿದೆ. ಜ. 28 ರಂದು ಸ್ಕಾಟ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.