ಬೆಂಗಳೂರು: ಡಿಬಾಸ್ ಎಂದು ಜೋರಾಗಿ ಕೂಗುತ್ತಿದ್ದ ವಿಚಾರದಿಂದಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಈ ಘಟನೆ ರಾಮನಗರ ಜಿಲ್ಲೆಯ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆಪಾಳ್ಯ ಗ್ರಾಮದಲ್ಲಿ ನಡೆದಿದೆ. ದೊಡ್ಡ ಮಣ್ಣುಗುಡ್ಡೆ ಗ್ರಾಮದ ವಾಸಿ ವೆಂಕಟಸ್ವಾಮಿ ಇರಿತಕ್ಕೊಳಗಾದ ವ್ಯಕ್ತಿ. ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆಪಾಳ್ಯದ ಬಡಾವಣೆಯೊಂದರಲ್ಲಿ ದೊಡ್ಡಮಣ್ಣುಗುಡ್ಡೆ ಗ್ರಾಮದ ಸುರೇಶ್ ಎಂಬುವವರು ನಿರ್ಮಿಸುತ್ತಿರುವ ಮನೆಯ ಕೆಲಸಕ್ಕಾಗಿ ವೆಂಕಟಸ್ವಾಮಿ, ಕಿರಣ್ ಮತ್ತು ಮಹದೇವ ಬಂದಿದ್ದರು. ಕೆಲಸದ ಸ್ಥಳದಲ್ಲೇ ಇವರಿಗಾಗಿ ಶೆಡ್ ವ್ಯವಸ್ಥೆ ಮಾಡಲಾಗಿತ್ತು.
ಗುರುವಾರ ರಾತ್ರಿ ಶೆಡ್ ಹತ್ತಿರ ಕಿರಣ್ ಮತ್ತು ಮಹದೇವ ಕುಳಿತು ದರ್ಶನ್ ಜೈಲಿನಿಂದ ಬಿಡುಗಡೆಯಾಗುವ ಕುರಿತು ಮಾತನಾಡುತ್ತಿದ್ದರು. ಆಗ ‘ಡಿ ಬಾಸ್ ಡಿ ಬಾಸ್’ ಎಂದು ಕೂಗಾಡುತ್ತಿದ್ದರು. ಈ ವೇಳೆ ವೆಂಕಟಸ್ವಾಮಿ ಕಿರುಚಬೇಡಿ, ತೊಂದರೆಯಾಗುತ್ತದೆ ಎಂದಿದ್ದಾರೆ.
ಕೋಪಗೊಂಡ ಕಿರಣ್ ಎಂಬಾತ, ಜಗಳ ತೆಗೆದು ಚಾಕುವಿನಿಂದ ವೆಂಕಟಸ್ವಾಮಿ ಅವರ ಕುತ್ತಿಗೆಗೆ ಇರಿದಿದ್ದಾನೆ. ಅಲ್ಲದೇ, ಅವರೊಂದಿಗೆ ಮಹದೇವ ಕೂಡ ಹಲ್ಲೆ ಮಾಡಿದ್ದಾನೆ. ಮಧ್ಯಪ್ರವೇಶಿಸಿದ ಸ್ಥಳೀಯರು ಜಗಳ ಬಿಡಿಸಿ, ಕೂಡಲೇ ವೆಂಕಟಸ್ವಾಮಿ ಅವರನ್ನು ರಾಮೋಹಳ್ಳಿಯ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.