ರಾಜ್ಯ ಸಚಿವ ಸಂಪುಟ ಪುನರ್ ರಚನೆಯ ವಿಚಾರ ಆಗಾಗ ಕೇಳಿ ಬರುತ್ತಿತ್ತು. ಹಲವು ಶಾಸಕರು ನಾನು ಆಕಾಂಕ್ಷಿ ಎಂಬ ಮಾತುಗಳನ್ನು ಹೇಳಿ, ಸಚಿವ ಸಂಪುಟ ವಿಸ್ತರಣೆಗೆ ಮನವಿ ಮಾಡುತ್ತಿದ್ದರು. ಇದಕ್ಕೆ ಸಿಎಂ ಕಿಡಿಕಾರುತ್ತಿದ್ದಂತೆ ಮತ್ತೆ ಅದು ತಣ್ಣಗಾಗುತ್ತಿತ್ತು. ಈಗ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿದೆ.
ಹೊಸ ವರ್ಷದ ಸಂದರ್ಭದಲ್ಲಿ ಸಂಪುಟ ಪುನಾರಚನೆ ವಿಚಾರ ಮತ್ತೆ ಜೀವ ಪಡೆದಿದೆ. ಆದರೆ, ಈ ಬಾರಿ ಸ್ವತಃ ಸಿಎಂ ಸಿದ್ದರಾಮಯ್ಯ ಈ ಕುರಿತು ಸುಳಿವು ನೀಡಿದ್ದರಿಂದಾಗಿ ಸಂಪುಟ ವಿಸ್ತರಣೆ ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿ ಕೆಲವು ಸಚಿವ ಸ್ಥಾನ ಆಕಾಂಕ್ಷಿತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಸಚಿವ ಸ್ಥಾನಕ್ಕಾಗಿ ಬ್ಯಾಟಿಂಗ್ ನಡೆಸಲು ಆರಂಭಿಸಿದ್ದಾರೆ.
ಹೊಸ ವರ್ಷದಲ್ಲಿ ಹೊಸ ತಂಡ ಕಟ್ಟುವ ಕುರಿತು ಸಿಎಂ ಸಿದ್ದರಾಮಯ್ಯ ಪರೋಕ್ಷ ಸುಳಿವು ನೀಡಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಸಂಪುಟ ಪುನರ್ ರಚನೆ ಬಗ್ಗೆ ಬೆಳವಣಿಗೆ ನಡೆದಿತ್ತು. ಆದರೆ, ಕೆಲವು ಪ್ರಭಾವಿ ನಾಯಕರ ಒತ್ತಡದಿಂದಾಗಿ ಅದು ತಣ್ಣಗಾಗಿತ್ತು ಎಂಬ ವಿಷಯ ಕೂಡ ಗುಟ್ಟಾಗಿ ಉಳಿದಿಲ್ಲ.
ಈಗ ಮತ್ತೆ ಸಂಪುಟ ಪುನರ್ ರಚನೆಯ ಕೂಗು ಜೋರಾಗಿದೆ. ಬಜೆಟ್ ಅಧಿವೇಶನದ ವೇಳೆಗೆ ಸಂಪುಟದಲ್ಲಿ ಹಲವು ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಕೇವಲ ಒಬ್ಬರಿಗೆ ಮಾತ್ರ ಅವಕಾಶ ಸಿಗುವದೇ? ಅಥವಾ ಹಲವರು ಸಚಿವರಾಗಿ ಬಡ್ತಿ ಪಡೆಯುವರೇ ಎಂಬ ಕುತೂಹಲ ಮನೆ ಮಾಡಿದೆ.