ಬಿಹಾರ : ಮತ ಕಳ್ಳತನ ಬಹಿರಂಗಪಡಿಸುವ ‘ಹೈಡೋಜನ್ ಬಾಂಬ್’ ಅನ್ನು ಕಾಂಗ್ರೆಸ್ ಶೀಘ್ರವೇ ಹೊರತರಲಿದ್ದು, ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ಈ ದೇಶದ ಜನರಿಗೆ ತಮ್ಮ ಮುಖವನ್ನು ತೋರಿಸಲು ಆಗುವುದಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮತ ಕಳ್ಳತನದ ಬಗ್ಗೆ ಕಾಂಗ್ರೆಸ್ ಸಂಗ್ರಹಿಸಿರುವ ದಾಖಲೆ ಹಾಗೂ ಸಾಕ್ಷಿಗಳನ್ನು ರಾಹುಲ್ ಗಾಂಧಿ ‘ಹೈಡೋಜನ್ ಬಾಂಬ್’ಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ.
‘ಓಟರ್ ಅಧಿಕಾರ ಯಾತ್ರೆ’ಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದು, ಬಿಹಾರ ಒಂದು ಕ್ರಾಂತಿಕಾರಿ ರಾಜ್ಯವಾಗಿದ್ದು, ಇದು ದೇಶಕ್ಕೆ ಒಂದು ಸಂದೇಶ ನೀಡಿದೆ. ಸಂವಿಧಾನವನ್ನು ಕೊಲೆ ಮಾಡಲು ನಾವು (ಕಾಂಗ್ರೆಸ್) ಬಿಡುವುದಿಲ್ಲ. ಅದಕ್ಕಾಗಿಯೇ ನಾವು ಯಾತ್ರೆಯನ್ನು ಕೈಗೊಂಡಿದ್ದು. ಈ ಯಾತ್ರೆಯಲ್ಲಿ ಜನರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಗರೇ, ಪರಮಾಣು ಬಾಂಬ್‌ಗಿಂತ ದೊಡ್ಡದಾದ ಬಾಂಬ್ ಯಾವುದನ್ನಾದರೂ ನೀವು ಕೇಳಿದ್ದೀರಾ?, ಅದು ಹೈಡೋಜನ್ ಬಾಂಬ್. ನೀವು (ಬಿಜೆಪಿ) ಸಿದ್ಧರಾಗಿರಿ, ಹೈಡೋಜನ್ ಬಾಂಬ್ ಹೊರಬರಲಿದ್ದು, ಜನರು ಶೀಘ್ರದಲ್ಲೇ ಮತ ಕಳ್ಳತದ ವಾಸ್ತವತೆಯನ್ನು ಕಂಡುಕೊಳ್ಳಲಿದ್ದಾರೆ ಎಂದು ರಾಹುಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೈಡೋಜನ್ ಬಾಂಬ್ ಹೊರಬಂದ ನಂತರ ಮೋದಿ ಈ ದೇಶದ ಜನರಿಗೆ ತಮ್ಮ ಮುಖ ತೋರಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಓಟ್ ಚೋರಿ (ಮತ ಕಳ್ಳತನ) ಎಂದರೆ ಹಕ್ಕುಗಳ ಕಳ್ಳತನ, ಉದ್ಯೋಗದ ಕಳ್ಳತನ ಒಳಗೊಂಡಂತೆ ಪಡಿತರ ಚೀಟಿ ಹಾಗೂ ಇತರ ಹಕ್ಕುಗಳನ್ನು ಕಸಿದುಕೊಳ್ಳುವುದಾಗಿದೆ ಎಂದು ರಾಹುಲ್ ತಿಳಿಸಿದ್ದಾರೆ. ಓಟರ್ ಅಧಿಕಾರ ಯಾತ್ರೆಯು ಬಿಹಾರದ ಒಟ್ಟು 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಿತ್ತು. ಯಾತ್ರೆಯು ಒಟ್ಟು 1,300 ಕಿ.ಮೀನಷ್ಟು ಕ್ರಮಿಸಿದೆ.