ತುಮಕೂರು: ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ಸುದ್ದಿ ದೊಡ್ಡ ಮಟ್ಟದ ಸಂಚಲನ ಮೂಡಿಸುತ್ತಿದೆ. ಹೇಳಿಕೆಗಳು, ಟಾಂಗ್ ಬಹಿರಂಗವಾಗಿಯೇ ಕೇಳಿ ಬರುತ್ತಿವೆ. ಈ ಮಧ್ಯೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ರಾಜೀನಾಮೆಯ ಹೇಳಿಕೆ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗುತ್ತಿದೆ.
ತುಮಕೂರಿನಲ್ಲಿ ಕಾರ್ಯಕರ್ತರ ಎದುರು ಮಾತನಾಡಿದ ಅವರು, “ನೀವೆಲ್ಲ ಸೇರಿ ದೊಡ್ಡ ಮನಸ್ಸು ಮಾಡಿ ನನ್ನ ರಾಜೀನಾಮೆ ಕೇಳಿದರೂ ನಾನು ಕೊಡುತ್ತೇನೆ. ಕಾರ್ಯಕರ್ತರ ಮನದಾಳಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ಮನಸ್ಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಆಗುತ್ತಿಲ್ಲ. ಹೀಗಾಗಿ ನಾನು ಕ್ಷಮೆ ಕೇಳುತ್ತೇನೆ. ನೀವು ಹೇಳಿದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ” ಎಂದು ಹೇಳಿದ್ದಾರೆ.
ಪರಮೇಶ್ವರ್ ಅವರ ಈ ಹೇಳಿಕೆಯಿಂದ ಕಾರ್ಯಕರ್ತರು ಮತ್ತು ಮುಖಂಡರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ದಯವಿಟ್ಟು ತಕ್ಷಣ ರಾಜೀನಾಮೆ ಕೊಡಬೇಡಿ” ಎಂದು ಕಾರ್ಯಕರ್ತರು ಕೂಗಿದ್ದಾರೆ.


















