ಬೆಂಗಳೂರು: ಬಿಜೆಪಿಯಂತೆ ಕಾಂಗ್ರೆಸ್ ನಲ್ಲಿ ಕೂಡ ಆಂತರಿಕ ಕಿತ್ತಾಟ ಜೋರಾಗಿ ನಡೆಯುತ್ತಿದೆ. ಅದು ಸರ್ಕಾರದ ಮೇಲೆ ಪರಿಣಾಮ ಬೀರುವಂತಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಾಯಿ ಹರಿಬಿಟ್ಟರೆ, ಎಷ್ಟೇ ದೊಡ್ಡವರಾದರೂ ಸ್ಥಾನದಿಂದ ಕಿತ್ತು ಹಾಕುವ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ.
ಸಿಎಂ ಹಾಗೂ ಡಿಸಿಎಂಗೆ ಈ ವಿಷಯವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬಾಯಿಗೆ ಬಂದಂತೆ ಮಾತನಾಡುವ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬೇಜವಾಬ್ದಾರಿತನದ ಹೇಳಿಕೆ ನೀಡಿದವರು ಸಚಿವರಾದರೂ ಅವರನ್ನು ಸಂಪುಟದಿಂದ ಕೈಬಿಡುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಹೈಕಮಾಂಡ್ ಕಿತ್ತು ಹಾಕುವ ಕಠಿಣ ನಿರ್ಧಾರಕ್ಕೆ ಬರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪವರ್ ಶೇರಿಂಗ್ ಸಂಘರ್ಷ
ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ವಿಚಾರವೇ ಈಗ ವಾದ-ವಿವಾದಕ್ಕೆ ಕಾರಣವಾಗುತ್ತಿದೆ. ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಹಲವರು ವಿಚಾರ ಪ್ರಸ್ತಾಪಿಸಿದ್ದರು. ಇದು ಆಂತರಿಕ ಸಂಘರ್ಷದ ಹಾದಿ ಹಿಡಿದಿತ್ತು. ಹೀಗಾಗಿ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ವಾರ್ನಿಂಗ್ ನೀಡಿದ್ದರು. ಈಗ ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಪಕ್ಷ ಮತ್ತು ಸರಕಾರದ ವರ್ಚಸ್ಸು ಕುಗ್ಗಿಸುವ ವರ್ತನೆ ತೋರುವವರು ಯಾರೇ ಆಗಿರಲಿ. ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.