ಹಾಸನ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ಪರಿಣಾಮ ಇದೀಗ ಕರ್ನಾಟಕದ ಕಾಫಿ ಉದ್ಯಮಕ್ಕೂ ತಟ್ಟಿದೆ. ಕಾಫಿ ರಫ್ತು ಬಹುತೇಕ ಸ್ಥಗಿತಗೊಂಡ ಹಿನ್ನೆಲೆ ಮಾರುಕಟ್ಟೆಯಲ್ಲಿ ಬೆಲೆಗಳು ತೀವ್ರ ಕುಸಿತ ಕಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಹಲವು ವರ್ಷಗಳ ಬಳಿಕ ಕಾಫಿಗೆ ಉತ್ತಮ ಬೆಲೆ ದೊರೆತಿದ್ದರಿಂದ, ಇನ್ನಷ್ಟು ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು ಕಾಫಿಯನ್ನು ಸಂಗ್ರಹಿಸಿಟ್ಟಿದ್ದರು. ಆದರೆ ಯುದ್ಧ ಆರಂಭವಾದ ಒಂದು ತಿಂಗಳಲ್ಲೇ ದರವು ಶೇಕಡಾ 20ರಷ್ಟು ಕುಸಿದಿದೆ.
ಪ್ರಸ್ತುತ ದರದ ಪ್ರಕಾರ, ಅರೇಬಿಕಾ ಕಾಫಿಯ 50 ಕೆಜಿ ಚೀಲದ ಬೆಲೆ ಕಳೆದ ವರ್ಷದ 29,000ರಿಂದ 23,000ಕ್ಕೆ ಇಳಿದಿದೆ. ರೊಬಸ್ಟಾ ಕಾಫಿ 12,000ರಿಂದ 8,000ಕ್ಕೆ ಕುಸಿದಿದೆ. ಇದರೊಂದಿಗೆ ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳಲ್ಲಿ ಉತ್ತಮ ಫಸಲು ಬಂದಿರುವುದೂ ಭಾರತೀಯ ಕಾಫಿಗೆ ಬೇಡಿಕೆ ಕಡಿಮೆಯಾಗಲು ಕಾರಣವಾಗಿದೆ. ಕಳೆದ ವರ್ಷ ಆ ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದ್ದರಿಂದ ಭಾರತೀಯ ಕಾಫಿಗೆ ಹೆಚ್ಚು ಬೇಡಿಕೆ ಇತ್ತು.
ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಸುಮಾರು 70 ಶೇಕಡಾ ಇದ್ದು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಲಕ್ಷಾಂತರ ಕುಟುಂಬಗಳು ಈ ಉದ್ಯಮದ ಮೇಲೆ ಅವಲಂಬಿತವಾಗಿವೆ. ಕಾಫಿ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ. ರಫ್ತುದಾರರಿಗೆ ನೀಡುವಂತೆಯೇ ಬೆಳೆಗಾರರಿಗೂ ನೆರವು ನೀಡಬೇಕೆಂದು ಸಲಹೆ ನೀಡಲಾಗಿದೆ.
ಇದೇ ವೇಳೆ ಇರಾನ್–ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಫಿ ಮಾರುಕಟ್ಟೆಯ ಮೇಲೆ ಹೇಗೆ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಕದನ ವಿರಾಮ ಘೋಷಣೆ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಭಾರೀ ಕುಸಿತ!



















