ಹಾಲಿವುಡ್ ನ ಜನಪ್ರಿಯ ಸಿನಿಮಾದಲ್ಲಿ ನಾಯಕ ತೊಟ್ಟಿದ್ದ ಟೋಪಿಯನ್ನು ಹರಾಜು ಹಾಕಲಾಗಿದೆ. ಈ ಹಳೆಯ ಟೋಪಿ ಬರೋಬ್ಬರಿ 5.28 ಕೋಟಿ ರೂ.ಗೆ ಹರಾಜಾಗಿದೆ.
ಭಾರತದಲ್ಲಿಯೇ ಚಿತ್ರೀಕರಣವಾಗಿದ್ದ ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾ ‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದಲ್ಲಿ ನಾಯಕ ಧರಿಸಿದ್ದ ಟೋಪಿಯೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಹರಾಜಾಗಿದೆ. ಸಿನಿಮಾ ಪ್ರೇಮಿಯೊಬ್ಬರು ಬರೋಬ್ಬರಿ 5.28 ಕೋಟಿ ರೂ. ಹಣ ನೀಡಿ ಅದನ್ನು ಖರೀದಿಸಿದ್ದಾರೆ.
‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿರುವ ಖ್ಯಾತ ನಟ ಹ್ಯಾರಿಸನ್ ಫೋರ್ಡ್, ಇಡೀ ಸಿನಿಮಾದಲ್ಲಿ ಹ್ಯಾಟ್ ತೊಟ್ಟಿದ್ದರು. ಯಾವುದೇ ವಿಶೇಷ ಡಿಸೈನ್ ಇಲ್ಲದ ಸಾಧಾರಣ ಹ್ಯಾಟ್ ಅದು. ಆ ಹ್ಯಾಟ್, ಸಿನಿಮಾದ ನಾಯಕ ಪಾತ್ರಕ್ಕೆ ವಿಶೇಷ ಕಳೆ, ವಿಶೇಷ ವ್ಯಕ್ತಿತ್ವ ನೀಡುತ್ತಿತ್ತು. ಹೀಗಾಗಿ ಅದೇ ಕಾರಣಕ್ಕೆ ಈ ಹ್ಯಾಟ್ ಜನರ ಆಕರ್ಷಣೀಯವಾಗಿತ್ತು.
‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದ ಹ್ಯಾಟ್ ಜೊತೆಗೆ ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’, ‘ಜೇಮ್ಸ್ ಬಾಂಡ್’ ಸಿನಿಮಾದ ಕೆಲವು ವಸ್ತುಗಳನ್ನು ಕೂಡ ಲಾಸ್ ಏಂಜಲ್ಸ್ ನಲ್ಲಿ ಹರಾಜು ಹಾಕಲಾಗಿದೆ. ಆದರೆ, ಈ ವಸ್ತುಗಳ ಬೆಲೆಗಳು ಮಾತ್ರ ಇದುವರೆಗೆ ಬಹಿರಂಗವಾಗಿಲ್ಲ.
‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾ 1984 ರಲ್ಲಿ ಬಿಡುಗಡೆ ಆಗಿತ್ತು. ಹ್ಯಾರಿಸನ್ ಫೋರ್ಡ್ ನಾಯಕನಾಗಿ ನಟಿಸಿದ್ದರು. ಭಾರತದಲ್ಲಿ ಈ ಚಿತ್ರ ಚಿತ್ರೀಕರಣಗೊಂಡಿತ್ತು. ಭಾರತದ ಖ್ಯಾತ ಖಳನಟ ಅಮರೀಶ್ ಪುರಿ ಕೂಡ ಈ ಚಿತ್ರದಲ್ಲಿ ನಟಿಸಿದ್ದರು. ಆ ವೇಳೆಯೇ ಈ ಚಿತ್ರ ಬರೋಬ್ಬರಿ 33 ಕೋಟಿ ರೂ. ಗಳಿಸಿತ್ತು. ಹಲವಾರು ಪ್ರಶಸ್ತಿಗಳು ಈ ಚಿತ್ರವನ್ನು ಹುಡುಕಿಕೊಂಡು ಬಂದಿದ್ದವು.